ಸಿಎಂ ಯೋಗಿಯ ಉತ್ತರ ಪ್ರದೇಶದಲ್ಲಿ ಖಲಿಸ್ಥಾನಿ ಉಗ್ರರ ಎನ್‌ಕೌಂಟರ್…!

ಡಿ.23 ರ ಸೋಮವಾರ ಬೆಳಗ್ಗೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಪುರನ್ಪುರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಎನ್‌ಕೌಂಟರ್ ನಡೆದಿದೆ. ಎನ್‌ಕೌಂಟರ್ ಆದವರು UP ಪೊಲೀಸರಿಗೆ ಬೇಕಾದವರಲ್ಲ, UP ಪೊಲೀಸರಿಗೂ ಇವರಿಗೂ ನೇರ ಸಂಭಂದ ಇರಲಿಲ್ಲ. ಆದರೆ ಪಂಜಾಬ್ ಪೊಲೀಸರಿಗೆ ಸಹಾಯ ಮಾಡುವ ಸಮಯದಲ್ಲಿ ಈ ಎನ್‌ಕೌಂಟರ್ ಆಗಿದೆ.
ಗುರುವಿಂದ್ ಸಿಂಗ್ 25 ವರ್ಷ, ವಿರೇಂದ್ರ ಸಿಂಗ್ ಅಲಿಯಾಸ್ ರವಿ 23 ವರ್ಷ ಮತ್ತು ಜಸ್ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ ಕೇವಲ 18 ವರ್ಷ ಎನ್‌ಕೌಂಟರ್ ಆದ ಉಗ್ರರು. ಈ ಮೂವರು ಉಗ್ರರು ಖಲಿಸ್ತಾನಿ ಕಮಾಂಡೋ ಫೋರ್ಸ್ ಮತ್ತು ಖಲಿಸ್ತಾನಿ ಜಿಂದಾಬಾದ್ ಫೋರ್ಸ್‌ನ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಪಂಜಾಬ್‌ನಲ್ಲಿ ಕೆಲವು ದಿನಗಳಿಂದ ಒಂದರ ನಂತರ ಒಂದು ದಾಳಿಗಳು ಆಗುತ್ತಿದ್ದವು. ಕಳೆದ ಒಂದು ತಿಂಗಳಿನಿಂದ ನ.24 ರಿಂದ ಇಲ್ಲಿಯವರೆಗೆ ಪಂಜಾಬ್‌ನಲ್ಲಿ ಸ್ಪೋಟಗಳು ಆಗಿವೆ. ನ.24 ರಂದು ಅಜನಾಲಾದ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದ್ದರು. ಗುರುಬಾಕ್ಸ್ ನಗರ್ ಪೊಲೀಸ್ ಮೇಲೂ ಕೂಡ ಕೈಯಿಂದ ಎಸೆಯುವ ಸ್ಪೋಟಕವನ್ನು ಬಿಸಾಡಿ ಓಡಿಹೋಗಿದ್ದರು. ಡಿ.4 ನೇ ತಾರೀಖು ಮಜಿತಾ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದ್ದರು. ಡಿ.17 ನೇ ತಾರೀಖು ಅಮೃತ್ಸರದ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮತ್ತು ಡಿ.18 ನೇ ತಾರೀಖು ಗುರದಾಸಪುರ ಪೊಲೀಸ್ ಸ್ಟೇಷನ್ ಮೇಲೆ ದಾಳಿ, ಈ ರೀತಿ ಸರಣಿ ದಾಳಿ ನಡೆಸಿದ್ದರು. ಡಿ.21 ನೇ ತಾರೀಖು ಸಹ ಗುರುದಾಸಪುರ ಜಿಲ್ಲೆಯ ಕಲ್ನೂರ್ ಪೊಲೀಸ್ ಸ್ಟೇಷನ್‌ನಲ್ಲಿ ಸ್ಫೋಟ ಮಾಡಿದ್ದರು. ಇತ್ತೀಚಿಗೆ ಈ ಮೂವರಿಗೋಸ್ಕರ ಪಂಜಾಬ್ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ಈ ಕಲ್ನೂರು ಸ್ಫೋಟದ ಬಗ್ಗೆ ತನಿಖೆ ಶುರು ಮಾಡಿದ ಪೊಲೀಸರಿಗೆ ಈ ಕೃತ್ಯದ ಹಿಂದೆ ಈ ಮೂವರು ಇರುವುದು ಗೊತ್ತಾಗಿತ್ತು. ಪೊಲೀಸರು ಉಗ್ರರನ್ನು ಹಿಡಿಯೋಕೆ ಬಲೆಬೀಸಿದರು ಆದರೆ, ದುಷ್ಕರ್ಮಿಗಳು ಅಷ್ಟರಲ್ಲಾಗಲೇ ನೂರಾರು ಕಿಲೋಮೀಟರ್ ಕ್ರಮಿಸಿ ಉತ್ತರಪ್ರದೇಶ ಗಡಿ ದಾಟಿ ಹೋಗಿದ್ದರು. ದಾಳಿ ನಡೆದು ಎರಡು ದಿನ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಇವರು ಪಂಜಾಬಿನ ಗುರುದಾಸ್‌ಪುರದಿಂದ UPಯ ಫಿಲಿಪಿತ್ ಜಿಲ್ಲೆಗೆ ಸುಮಾರು 750 ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ. ಇದು ನೇಪಾಳಕ್ಕೆ ತುಂಬಾ ಹತ್ತಿರದ ಪ್ರದೇಶ, ಅಲ್ಲಿ ಸಿಖ್ ಜನಸಂಖ್ಯೆ ಹೆಚ್ಚಿರುವ ಕಡೆ ಹೋಗಿ ಸೇರಿಕೊಳ್ಳಬೇಕೆಂಬುದು ಉಗ್ರರ ಯೋಜನೆಯಾಗಿತ್ತು. ಮೂವರು ಉಗ್ರರ ಬೆನ್ನು ಬಿದ್ದ ಪಂಜಾಬ್ ಪೊಲೀಸರು ಈ ವಿಚಾರವನ್ನು UP ಪಿಲಿಭಿತ್ ಪೊಲೀಸರಿಗೆ ಹೇಳಿದ್ದಾರೆ. UP ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಬರುವ ಪುರಂತಪುರ್ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಅದಾದ ಬಳಿಕ ಪುರಂರಪುರ್ ಮತ್ತು ಪಂಜಾಬ್ ಪೊಲೀಸರು ಅಪರೇಷನ್ ನಡೆಸುವಾಗ UP ಯಲ್ಲಿ ಈ ಎನ್‌ಕೌಂಟರ್ ನಡೆದಿದೆ. ಈ ಕಾರ್ಯಾಚರಣೆ ಸಂದರ್ಭದಲ್ಲಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ದಾರಿಗಳನ್ನು ಕೆಲ ಕಾಲ ಬ್ಯಾರಿಕೇಡ್ ಹಾಕಿ ಬ್ಲಾಕ್ ಮಾಡಲಾಗಿತ್ತು.
ಸೋಮವಾರ ಬೆಳಗಿನ ಜಾವ ಈ ಮೂವರು ಇರುವ ಜಾಗದ ಬಗ್ಗೆ ಖಚಿತ ಮಾಹಿತಿ ದೊರಕಿತ್ತು. ಸ್ಥಳೀಯರು ಅವರಿಗೆ ಬೆಂಬಲ ಕೊಟ್ಟಿದ್ದರು. ಹಾಗಾಗಿ ಪೊಲೀಸರು ಉಗ್ರರನ್ನು ಹಿಡಿಯಲು ಗುಪ್ತವಾಗಿ ಯೋಜನೆ ಹಾಕಿದ್ದರು. ಪುರಂತಪುರ್ ಬಳಿ ಬೈಕ್‌ನಲ್ಲಿದ್ದ ಉಗ್ರರು ಪೊಲೀಸರನ್ನು ಕಂಡ ಕೂಡಲೇ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಬಳಸಿ ಗುಂಡು ಹಾರಿಸಲು ಶುರು ಮಾಡಿದರು. ಪೊಲೀಸರೂ ಕೂಡ ಪ್ರತಿಯಾಗಿ ಗುಂಡು ಹಾರಿಸಿ ಉಗ್ರರನ್ನು ಎನ್‌ಕೌಂಟರ್ ಮಾಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಅಫ್ಘಾನಿಸ್ತಾನದಲ್ಲಿ ಉಗ್ರರು ಹೆಚ್ಚಾಗಿ ಬಳಸುವ ಎಕೆ ಸೀರೀಸ್‌ನ ಬಂದೂಕುಗಳು, ಪಿಸ್ತೂಲ್‌ಗಳು ಮತ್ತು ಅಪಾರ ಪ್ರಮಾಣದ ಗುಂಡುಗಳು ಸಿಕ್ಕಿವೆ. ಅವುಗಳನ್ನೆಲ್ಲಾ ಸೀಜ್ ಮಾಡಲಾಗಿದೆ. ಈ ಉಗ್ರರಿಗೆ ಪಾಕಿಸ್ತಾನದ ನೇರ ಸಂಪರ್ಕ ಇರುವ ಸಾಧ್ಯತೆಯಿದೆ. ಪಾಕಿಸ್ತಾನವೇ ಖಲಿಸ್ತಾನಿಗಳನ್ನು ಪೋಷಿಸುತ್ತಿರುವುದು. ಎಕೆ ಸೀರೀಸ್‌ನ ಬಂದೂಕುಗಳು ಪಾಕಿಸ್ತಾನದ ಐಎಸ್‌ಐ ನಲ್ಲಿ ಬಿಟ್ಟರೆ ಬೇರೆಲ್ಲೂ ಸಿಗುವುದಕ್ಕೆ ಸಾಧ್ಯವಿಲ್ಲ. ಆರಂಭಿಕ ತನಿಖೆಯಲ್ಲಿ ಇವರು ಖಲಿಸ್ತಾನಿ ಕಮಾಂಡೋ ಫೋರ್ಸ್‌ನ ಸದಸ್ಯರು ಮತ್ತು ಖಲಿಸ್ತಾನಿ ಜಿಂದಾಬಾದ್ ಫೋರ್ಸ್‌ನ ಮಾಡ್ಯೂಲ್‌ಗಳು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
UP ಯಲ್ಲಿ ಯೋಗಿ ಅಧಿಕಾರಕ್ಕೆ ಬಂದಾಗಿನಿಂದ ಕೇವಲ 7 ವರ್ಷದಲ್ಲಿ ಸುಮಾರು 13 ಸಾವಿರ ಎನ್‌ಕೌಂಟರ್ ಆಗಿವೆ. 13 ಸಾವಿರ ಎನ್‌ಕೌಂಟರ್‌ನಲ್ಲಿ 207 ಜನರ ಪ್ರಾಣ ಹೋಗಿದೆ ಇನ್ನುಳಿದವರಿಗೆ ಗಾಯಗಳಾಗಿವೆ.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ