ಪಶ್ಚಿಮ ಘಟ್ಟಗಳ ರಕ್ಷಣೆಗೆ ಖಂಡ್ರೆ ಖಡಕ್ ಸೂಚನೆ!

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಗುಡ್ಡ ಕುಸಿತಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಮಹತ್ವದ ಸೂಚನೆಯನ್ನು ಇಂದು ನೀಡಿದ್ದಾರೆ. ಅನಧಿಕೃತವಾಗಿ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು, ಕಟ್ಟಡಗಳನ್ನು, ತೋಟ ಹಾಗೂ ಹೋಂಸ್ಟೇಗಳನ್ನು ನಿರ್ಮಿಸಿಕೊಂಡಿರುವವರಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದು ಕೊಂಡಿರುವ ಈಶ್ವರ್ ಖಂಡ್ರೆ ಅವರು, “ಶಿರೂರು, ವಯನಾಡ್ ಭೂಕುಸಿತ ರಾಜ್ಯಕ್ಕೆ ಎಚ್ಚರಿಕೆ ಗಂಟೆ ಆಗಿದ್ದು ಪಶ್ಚಿಮ ಘಟ್ಟದ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ.
ರಾಜ್ಯದ ಪಶ್ಚಿಮ ಘಟ್ಟದಲ್ಲಿ 2015 ರಿಂದೀಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಪಶ್ಚಿಮ ಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ.” ಎಂದು ಹೇಳಿದ್ದಾರೆ.
ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತ, ಹಾಗೆ ಕೇರಳದ ವಯನಾಡ್ ಭೂಕುಸಿತಗಳು ಎಚ್ಚರಿಕೆಯ ಗಂಟೆಗಳಾಗಿವೆ ಎಂದು ಖಂಡ್ರೆಯವರು ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆದ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತು ಮುಂದಿನ ಹೆಜ್ಜೆ ಇಟ್ಟರೆ, ಪಕ್ಕದ ರಾಜ್ಯ ಕೇರಳದಲ್ಲಿ ಸಂಭವಿಸಿರುವಂತಹ ದುರ್ಘಟನೆಗಳು ನಮ್ಮ ರಾಜ್ಯದಲ್ಲಿ ಸಂಭವಿಸಲಾರದು.