ಖೋಖೋ ವಿಶ್ವಕಪ್ ವಿಜೇತರ ಸುದ್ದಿಗೋಷ್ಠಿ; ರಾಜ್ಯದಲ್ಲಿ ಕ್ರೀಡಾಳುಗಳ ನಿರ್ಲಕ್ಷಕ್ಕೆ ಆಕ್ರೋಶ..!!
ವಿಶ್ವ ಖೋಖೋ ಚಾಂಪಿಯನ್ʼಶಿಪ್ʼನಲ್ಲಿ ಜಯಗಳಿಸಿದ ಕರ್ನಾಟಕ ಆಟಗಾರರಾದ MK ಗೌತಮ್ ಹಾಗೂ ಚೈತ್ರಾ, ಕರ್ನಾಟಕ ಖೋಖೋ ಅಸೋಸಿಯೇಷನ್ ಅಧ್ಯಕ್ಷರಾದ ಲೋಕೇಶ್ವರ್, ಕರ್ನಾಟಕ ಪ್ರೆಸ್ ಕ್ಲಬ್ʼನಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದರು.

ಖೋಖೋ ವಿಶ್ವಕಪ್ ವಿಜೇತ ಕರ್ನಾಟಕದ ಆಟಗಾರ್ತಿ ಚೈತ್ರಾ ಮಾತನಾಡಿ, ಚೊಚ್ಚಲ ವಿಶ್ವಕಪ್ ಜಯಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮೂಲತಃ ಮೈಸೂರಿನವರಾದ ಚೈತ್ರಾ, “ನಾನೇನಾದ್ರೂ ವಿಶ್ವಕಪ್ ಆಡಿದ್ದೇನೆ ಅಂದರೆ ಅದಕ್ಕೆ ಮೂಲ ಕಾರಣವೇ, ಕರ್ನಾಟಕ ಖೋಖೋ ಅಸೋಸಿಯೇಷನ್ ಅಧ್ಯಕ್ಷರಾದ ಲೋಕೇಶ್ವರ್ ಸರ್. ನಮಗೆ ಸದಾ ಕಾಲ ಅವರು ಬೆನ್ನೆಲುಬಾಗಿ ನಿಂತಿದ್ರು” ಎಂದರು. ಈ ವೇಳೆ ಪರರಾಜ್ಯಗಳಿಗೆ ಹೋಲಿಸಿದ್ರೆ, ಕರ್ನಾಟಕದಲ್ಲಿ ಅಥ್ಲೀಟ್ʼಗಳಿಗೆ ಸಿಗುವ ಉತ್ತೇಜನ ಕಡಿಮೆ ಎಂಬ ಬಗ್ಗೆ ಮಾತನಾಡಿದ ಚೈತ್ರಾ, “ಪರ ರಾಜ್ಯಗಳಲ್ಲಿ ಖೋಖೋ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಆಟಗಾರರಿಗೆ ಕೊಟಿ ಕೋಟಿ ಘೋಷಿಸಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ವಿಶ್ವಕಪ್ ವಿಜೇತರಾದ ನಮಗೆ ಘೋಷಿಸಿರುವುದು ಕೇವಲ 5 ಲಕ್ಷ ರೂ. ಮಾತ್ರ, ಇದು ಬೇಸರ ತರಿಸಿದೆ. ಇಷ್ಟು ಕಡಿಮೆ ಹಣದಲ್ಲಿ ನಾವು ಜೀವನ ಸಾಗಿಸಲು ಸಾಧ್ಯವಿಲ್ಲ. ಇದನ್ನು ನಾವು ತಿರಸ್ಕರಿಸುತ್ತೇವೆ. ಈ ವಿಷಯವನ್ನು ಸರ್ಕಾರದ ಗಮನಕ್ಕೂ ತರುತ್ತೇವೆ“ ಎಂದರು. ಕ್ರಿಕೆಟ್, ಫುಟ್ʼಬಾಲ್ ಸೇರಿದಂತೆ, ಬೇರೆ ಕ್ರೀಡೆಗಳಿಗೆ ಸಿಗುತ್ತಿರುವ ಉತ್ತೇಜನ, ನಮಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವಕಪ್ ವಿಜೇತ ಆಟಗಾರ MK ಗೌತಮ್ ಮಾತನಾಡಿ, ನಾವು ಖೋಖೋ ವಿಶ್ವಕಪ್ ಗೆದ್ದಿರುವುದು ಹೆಮೆಯ ವಿಷಯ ಎಂದರು. “ಚಿಕ್ಕಂದಿನಿಂದಲೂ ಚಾಂಪಿಯನ್ ಆಗಬೇಕೆಂಬುದು ನನ್ನ ಕನಸು. ಕರ್ನಾಟಕ ಖೋಖೋ ಅಸೋಸಿಯೇಷನ್ ಸಹಕಾರ, ಅದರ ಅಧ್ಯಕ್ಷರಾದ ಲೋಕೇಶ್ವರ್ ಸರ್ ಸಹಕಾರ ಹಾಗೇ ಇಂಡಿಯನ್ ಖೋಖೋ ಅಸೋಸಿಯೇಷನ್ ಸಹಕಾರದಿಂದ ಆ ಕನಸು ನನಸಾಗಲು ಸಾಧ್ಯವಾಯ್ತು. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಿಂದಲೇ ಇಬ್ಬರು ಆಟಗಾರರು ತಂಡವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ವಿಷಯ ” ಎಂದರು. ಕರ್ನಾಟಕ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಗೌತಮ್, “ನಾವು ಇಷ್ಟು ಸಾಧನೆ ಮಾಡಿದ್ರೂ ರಾಜ್ಯದಲ್ಲಿ ನಮಗೆ ಸಿಗಬೇಕಾದ ಮನ್ನಣೆ, ಗೌರವ ಸಿಗುತ್ತಿಲ್ಲ. ನಿನ್ನೆ ರಾಜ್ಯ ಸರ್ಕಾರ ನಮ್ಮನ್ನು ನಡೆಸಿಕೊಂಡ ರೀತಿಗೆ ತೀವ್ರ ಬೇಸರವಾಗಿದೆ” ಎಂದರು. “ಉತ್ತರ ಭಾರತದ ರಾಜ್ಯಗಳಲ್ಲಿ ಕ್ರೀಡಾಳುಗಳು ಉತ್ತಮ ಸಾಧನೆ ಮಾಡಿದ ತಕ್ಷಣ, ಮುಖ್ಯಮಂತ್ರಿ ಆದಿಯಾಗಿ ಅವರನ್ನು ತಕ್ಷಣ ಗುರುತಿಸಿ, ಕೋಟಿ ಕೋಟಿ ಬಹುಮಾನ ಘೋಷಿಸುತ್ತಾರೆ. ಆದರೆ ನಮ್ಮಲ್ಲಿ ಅಂಥವರನ್ನು ನಿರ್ಲಕ್ಷಿಸುತ್ತಾರೆ. ನಮಗೆ ಕೇವಲ 5 ಲಕ್ಷ ಘೋಷಿಸಿರುವುದು ಬೇಸರದ ಸಂಗತಿ. ವರ್ಷಾನುಗಟ್ಟಲೆ ನಮಗೆ ತರಬೇತಿ ನೀಡಿ ತಯಾರು ಮಾಡುವುದಕ್ಕೆ, ಇದಕ್ಕಿಂತಲೂ ಹೆಚ್ಚು ಹಣ ಖರ್ಚಾಗುತ್ತದೆ. ಹಾಗಾಗಿ ಇಷ್ಟು ಕಡಿಮೆ ಧನ ಸಹಾಯ ಘೋಷಿಸಿರುವುದನ್ನು ನಾವು ಅವಮಾನ ಎಂದೇ ಪರಿಗಣಿಸುತ್ತೇವೆ. ಈ ಹಣವನ್ನು ನಾವು ತಿರಸ್ಕರಿಸುತಿದ್ದೇವೆ” ಎಂದು ತಿಳಿಸಿದರು.

ನಂತರ ಮಾತನಾಡಿದ ಕರ್ನಾಟಕ ಖೋಖೋ ಅಸೋಸಿಯೇಷನ್ ಅಧ್ಯಕ್ಷ ಲೋಕೇಶ್ವರ್, “ಕಳೆದ 40 ವರ್ಷಗಳಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳು ಈ ಕ್ರೀಡೆಯಲ್ಲಿ 2-3 ಸ್ಥಾನದಲ್ಲೇ ಮುಂದುವರೆಯುತ್ತಿವೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಖೋಖೋಗಾಗಿ ಎರಡು ಅರ್ಜುನ ಪ್ರಶಸ್ತಿ, ರಾಷ್ಟ್ರ ಮಟ್ಟದಲ್ಲಿ ಮಹಿಳೆಯರಿಗಾಗಿ ನೀಡುವ 10 ಝಾನ್ಸಿ ರಾಣಿ ಪ್ರಶಸ್ತಿ, ರಾಷ್ಟ್ರ ಮಟ್ಟದಲ್ಲಿ ಪುರುಷರಿಗೆ ನೀಡಲಾಗುವ 7 ಏಕಲವ್ಯ ಪ್ರಶಸ್ತಿ, 7 ಅಭಿಮನ್ಯು ಪ್ರಶಸ್ತಿ, ಕಿರಿಯ ಬಾಲಕಿಯರಿಗೆ ನೀಡಲಾಗುವ 8 ಜಾನಕಿ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳನ್ನು ಕಳೆದ 40 ವರ್ಷಗಳಲ್ಲಿ ಪಡೆದಿದ್ದಾರೆ. ನಮಗೆ ಒಂದು ವರ್ಷದಲ್ಲಿ ಮೂರು ಹಂತದ ಖೋಖೋ ಪಂದ್ಯಗಳಿಗೆ ಕ್ರೀಡಾಪಟುಗಳನ್ನು ತಯಾರು ಮಾಡಲು, ಕನಿಷ್ಠ 20-25 ಲಕ್ಷ ರೂ. ಖರ್ಚಾಗುತ್ತದೆ. ಆದರೆ 2014ರಿಂದ ಸರ್ಕಾರ ಒಂದೇ ಒಂದು ರೂಪಾಯಿಯನ್ನೂ ನಮ್ಮ ಅಸೋಸಿಯೇಷನ್ʼಗೆ ಕೊಟ್ಟಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಷ್ಟೆಲ್ಲ ಸಾಧನೆ ಮಾಡಿದ್ದರೂ ಸರ್ಕಾರದಿಂದ ನಮಗೆ ಸಿಗಬೇಕಾದ ಅನುದಾನ, ಸೌಲಭ್ಯಗಳು ಸಿಗುತ್ತಿಲ್ಲ. ಕೆಲವು ವ್ಯಕ್ತಿಗಳ ರಾಜಕೀಯ ಹಿತಾಸಕ್ತಿಗೆ ನಮ್ಮಲ್ಲಿನ ಪ್ರತಿಭೆಗಳು ಬಲಿಯಾಗ್ತಿದ್ದಾರೆ. ಸರ್ಕಾರ ಮುಂದಿನ ದಿನಗಳಲ್ಲಿಇದರ ಬಗ್ಗೆ ಗಮನ ಹರಿಸದಿದ್ದರೆ, ಮುಂಬರುವ ದಿನಗಳಲ್ಲಿ ಫ್ರೀಡಂ ಪಾರ್ಕ್ʼನಲ್ಲಿ, ಕರ್ನಾಟಕದ ಎಲ್ಲಾ ಅಥ್ಲೀಟ್ʼಗಳನ್ನೂ ಜೊತೆಗೆ ಸೇರಿಸಿಕೊಂಡು, ಒಂದೊಂದು ರೂಪಾಯಿಯನ್ನೂ ಕರ್ನಾಟಕದ ಜನತೆಯಲ್ಲಿ ಭಿಕ್ಷೆ ಬೇಡಿ ನಮ್ಮ ಮಕ್ಕಳನ್ನು ಸಾಕಬೇಕಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಿಕ್ಷೆಯ ರೀತಿ ನಮ್ಮ ಕ್ರೀಡಾಪಟುಗಳಿಗೆ 5 ಲಕ್ಷ ರೂ. ಘೋಷಿಸಿದ್ದಾರೆ, ಇದನ್ನು ಖಡಾಖಂಡಿತವಾಗಿ ನಾವು ನಿರಾಕರಿಸುತ್ತೇವೆ” ಎಂದರು.
ನಂತರ, ಖೋಖೋದಲ್ಲಿ ಸಾಧನೆ ಮಾಡಿದ ಇಬ್ಬರು ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಸುದ್ದಿಗೋಷ್ಠೀಯಲ್ಲಿ ಪ್ರೆಸ್ ಕ್ಲಬ್ʼನ ಅಧ್ಯಕ್ಷರಾದ R.ಶ್ರೀಧರ್ ಹಾಗೂ ಉಪಾಧ್ಯಕ್ಷ ಮೋಹನ್ ಹಾಜರಿದ್ದರು.
ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ