ಕೊಡಗಿನ ಕುವರ ಎಸ್.ವಿ ಸುನೀಲ್
ವಿಶಾಖಾ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ
ಕ್ರೀಡೆ ಎಂದ ತಕ್ಷಣ ಸಾಮಾನ್ಯವಾಗಿ ನಮಗೆಲ್ಲ ನೆನಪಿಗೆ ಬರುವುದು ಕ್ರಿಕೆಟ್. ಆದರೆ ಇದರ ಹೊರತಾಗಿಯೂ ಅನೇಕ ಕ್ರೀಡೆ ಹಾಗೂ ತೆರೆಮರೆಯ ಕ್ರೀಡಾ ಸಾಧಕರಿದ್ದರೆ . ಹಾಕಿ ಕೂಡಾ ಅಂತಹುದೇ ಒಂದು ತೆರೆಮರೆಯ ಕ್ರೀಡೆಗೆ ಸೇರ್ಪಡೆಯಾಗುತ್ತದೆ. ಇತ್ತೀಚಿಗೆ ಬಂದ ಕೆಲ ಹಾಕಿ ಆಟಗಾರ ಜೀವನಾಧಾರಿತ ಸಿನಿಮಾ, ಹಾಗೂ ಪುಸ್ತಕಗಳು ಅವರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.
ಹಾಕಿ ಹಾಗೂ ನಮ್ಮ ಕರ್ನಾಟಕದ ಕೊಡಗಿಗೆ ಅವಿನಾಭಾವ ಸಂಬಂಧವಿದೆ . ಕೊಡಗಿನಿಂದ ಬಂದ ಅನೇಕ ಪ್ರತಿಭೆಗಳು ಹಾಕಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದ್ದು ನಾಡಿನ ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಹಾಕಿ , ಕೊಡಗಿನ ಸಂಸ್ಕೃತಿಯಲ್ಲಿ ಬೆರೆತುಕೊಂಡಿರುವ ಕ್ರೀಡೆಯಾಗಿದ್ದು ಇದೇ ಕಾರಣದಿಂದಾಗಿ ಅನೇಕ ಹಾಕಿ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಸಾಧನೆ ಮಾಡಿದ್ದಾರೆ.
ಅಂತಹ ಆಟಗಾರರ ಪೈಕಿ ಎಸ್‌ವಿ ಸುನಿಲ್ ಒಬ್ಬರು. 1989 ಮೇ 6ರಂದು ವಿಠಲಾಚಾರ್ಯ ಹಾಗೂ ಶಾಂತಾ ದಂಪತಿಯ ಪುತ್ರನಾಗಿ ಕೊಡಗು ಜಿಲ್ಲೆಯಲ್ಲಿ ಸುನಿಲ್ ಜನಿಸುತ್ತಾರೆ. ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಸುನಿಲ್ , ಬಡತನದಲ್ಲಿಯೇ ತಮ್ಮ ಬಾಲ್ಯವನ್ನು ಕಳೆದರು. ತಂದೆ ಬಡಗಿ ಕೆಲಸ ಮಾಡುತ್ತಿದ್ದರೆ ಸಹೋದರ ಅಕ್ಕಸಾಲಿಗ ವೃತ್ತಿಯನ್ನು ಮಾಡುತ್ತಿದ್ದರು.
ಬಡತನದ ಮಧ್ಯೆಯೇ ಸಾಧನೆ
ಮನೆಯಲ್ಲಿರುವ ಕಷ್ಟಗಳನ್ನು ನೋಡುತ್ತಾ ಬೆಳೆದಿದ್ದ ಸುನಿಲ್ ಗೆ ಸಾಧನೆ ಮಾಡಲು ಬೇರೆ ಕಾರಣ ಬೇಕಿರಲಿಲ್ಲ. ತಮ್ಮ ಸಂಸ್ಲೃತಿಯ ಭಾಗವಾಗಿರುವ ಹಾಕಿಯಲ್ಲಿ ಆಸಕ್ತಿ ಬೆಳೆಯಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ಬಿದಿರಿನ ಕೋಲನ್ನು ಹಾಕಿ ಸ್ಟಿಕ್ಕನ್ನಾಗಿ ಮಾಡಿಕೊಂಡು ಸುನಿಲ್ ತಮ್ಮ ಆರಂಭಿಕ ದಿನಗಳಲ್ಲಿ ಕಠಿಣ ಅಭ್ಯಾಸ ಮಾಡುತ್ತಿದ್ದರಂತೆ. ಇದುವೇ ನಂತರ ಅವರನ್ನು ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆಯುವಂತಾಗಲು ಕಾರಣವಾಯಿತು.
ಹಾಕಿಯಲ್ಲಿ ಅವರಿಗಿದ್ದ ಶ್ರದ್ಧೆ, ಕಲಿಕಾ ಆಸಕ್ತಿ ಅವರಿಗೆ ಹೆಚ್ಚಿನ ಅವಕಾಶವನ್ನು ಒದಗಿಸಿತ್ತು.14 ವರ್ಷದವರಾಗಿದ್ದಾಗ ಬೆಂಗಳೂರಿನ ಬಾಯ್ಸ್ ಸ್ಪೋರ್ಟ್ಸ್ ಕಂಪನಿಯಲ್ಲಿ ತರಬೇತಿಗೆ ಆಯ್ಕೆಯಾದರು. ಅಲ್ಲಿಂದ ಮುಂದೆ 2005ರಲ್ಲಿಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಸರ್ವೀಸ್ ಕಾರ್ಪ್ಸ್‌ಗೆ ಆಯ್ಕೆಯಾದರು. ಅಲ್ಲಿ ಅವರು ಇಂಟರ್-ಸರ್ವೀಸ್ ಲೀಗ್‌ನಲ್ಲಿ ಹಾಕಿ ಆಟಗಾರರಾಗಿ ಮಿಂಚಿದರು. ನಂತರ 2007 ರಲ್ಲಿ ಪ್ರೀಮಿಯರ್ ಹಾಕಿ ಲೀಗ್ ಆರಂಭವಾದಾಗ ಚೆನ್ನೈ ವೀರನ್ಸ್ ಪರವಾಗಿ ಆಡುವ ಅವಕಾಶ ಗಳಿಸಿಕೊಂಡರು. ಅಲ್ಲಿಂದ ಮುಂದೆ ಅವಕಾಶಗಳು ಅವರಿಗೆ ತೆರೆದುಕೊಂಡವು.
2007ರಲ್ಲಿ ಭಾರತ ಹಾಕಿ ತಂಡಕ್ಕೆ ಪ್ರವೇಶ
ಪ್ರೀಮಿಯರ್ ಹಾಕಿ ಲೀಗ್‌ನಲ್ಲಿ ಮಿಂಚಲು ಆರಂಭಿಸಿದ್ದ ಎಸ್‌ವಿ ಸುನಿಲ್ ನಂತರ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಲು ಹೆಚ್ಚಿನ ಬೇಕಾಗಿರಲಿಲ್ಲ . 2007ರಲ್ಲಿ ಚೆನ್ನೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಸುನಿಲ್ ಭಾರತ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಶ್ರೀಲಂಕಾ ವಿರುದ್ಧ ಮೊದಲ ಗೋಲು ಬಾರಿಸಿದ್ದ ಸುನಿಲ್ ಆ ಪಂದ್ಯದಲ್ಲಿಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಸಾಧನೆ ಮಾಡಿದರು.ಅಂತಾರಾಷ್ಟ್ರೀಯ ಹಾಕಿಯಲ್ಲಿ ಒಟ್ಟು 264 ಪಂದ್ಯಗಳನ್ನು ಆಡಿರುವ ಸಾಧನೆ ಮಾಡಿರುವ ಸುನಿಲ್ ಹೆಸರಿನಲ್ಲಿ 72 ಗೋಲುಗಳಿದೆ. 2012, 2016ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅವರು 2021ರ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದರು. 2011ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನ, 2012ರ ಏಷ್ಯನ್ ಚಾಂಪಿಯನ್ ಟ್ರೋಫಿಯಲ್ಲಿ ಬೆಳ್ಳಿ ಗೆದ್ದ ತಂಡದ ಭಾಗವಾಗಿದ್ದರು.
ತಂದೆಯ ಸಾವಿನಲ್ಲೂ ದೇಶಕ್ಕೋಸ್ಕರ ಆಟ
ಈಜಿಪ್ಟ್ ವಿರುದ್ಧ ಭಾರತ ಪಂದ್ಯಗಳನ್ನು ಆಡುತ್ತಿರುವಾಗ , ಆರಂಭಿಕ ಪಂದ್ಯಕ್ಕೆ ಕೆಲವು ಗಂಟೆಗಳ ಮೊದಲು ಅವರ ತಂದೆಯ ಸಾವಿನ ಸುದ್ದಿ ಅವರನ್ನು ತಲುಪಿತು. ತರಬೇತುದಾರ ಹರೇಂದ್ರ ಸಿಂಗ್ ಮನೆಗೆ ಮರಳುವಂತೆ ಕೇಳಿಕೊಂಡರೂ ಸುನಿಲ್ ಪಂದ್ಯವನ್ನು ಆಡಲು ಹೋದರು. ಇದು ಅವರ ಕ್ರೀಡಾಭಿಮಾನವನ್ನು ತೋರುತ್ತದೆ. ಇದೇ ರೀತಿಯ ಸಂದರ್ಭಗಳಲ್ಲಿ ಆಡಿದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಂದ ಸ್ಫೂರ್ತಿ ಪಡೆದಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ, 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚು, 2017ರ ಏಷ್ಯಾ ಕಪ್‌ನಲ್ಲಿ ಚಿನ್ನ, 2016 ಹಾಗೂ 2018ರ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು ಸುನಿಲ್. ಸುನಿಲ್ ಅವರ ಈ ಸಾಧನೆಗೆ 2017ರಲ್ಲಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ. 2021ರಲ್ಲಿ ತಮ್ಮ ಸುಧೀರ್ಘ 14 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು. ಆದರೆ ಆಡುವ ಹುಮ್ಮಸ್ಸು ಅವರನ್ನು ಮತ್ತೆ ಮೈದಾನಕ್ಕೆ ವಾಪಸ್ ಕರೆತಂದಿತು, ಮತ್ತೆ ನಿವೃತ್ತಿಯನ್ನು ವಾಪಾಸ್ ಪಡೆದು ಏಷ್ಯಾ ಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದರು . ಯಾವುದೇ ಪರಿಸ್ಥಿತಿ ಇರಲಿ ದೇಶ ಮೊದಲು ಎಂದು ಆಡುವ ಹಲವಾರು ಕ್ರೀಡಾಪಟುಗಳು ನಮ್ಮ ಕಣ್ಣೆದುರಿಗಿದ್ದಾರೆ .ಬಡತನ ಸಾಧನೆಗೆ ಅಡ್ಡಿಯಾಗಲಾರದು ಎಂಬ ಮಾತಿಗೆ ಸುನಿಲ್ ಅಧ್ಬುತ ಉದಾಹರಣೆಯಾಗಿದ್ದಾರೆ. ಹಾಗೂ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ.