ಕೋಮಲ್ ಕುಮಾರ್ ‘ಯಲಾಕುನ್ನಿ’: ಅಕ್ಟೋಬರ್ 25ಕ್ಕೆ ರಂಗಮಂದಿರದಲ್ಲಿ ವಜ್ರಮುನಿ..!
ಬೆಂಗಳೂರು: ಬಹು ನಿರೀಕ್ಷಿತ ಚಿತ್ರ “ಯಲಾಕುನ್ನಿ” ಅಕ್ಟೋಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಕೋಮಲ್ ಕುಮಾರ್, ಬೃಹತ್ ಭಯಂಕರ ವಜ್ರಮುನಿ ಅವರ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಸಿನಿಪ್ರಿಯರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.
ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ, ಅನುಸೂಯಾ ಕೋಮಲ್ ಕುಮಾರ್ ಮತ್ತು ಸಹನಾ ಮೂರ್ತಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹೊಸ ನಿರ್ದೇಶಕ ಎನ್.ಆರ್. ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು, ತಮ್ಮ ಮೊದಲ ಚಿತ್ರದಲ್ಲಿಯೇ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದ್ದಾರೆ.
ಚಿತ್ರದ ಹೈಲೈಟ್ ಎಂದರೆ, ವಜ್ರಮುನಿ ಅವರ ಮೊಮ್ಮಗ ಆಕರ್ಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಿಸರ್ಗ ಅಪ್ಪಣ್ಣ, ಜೊತೆಗೆ ಹಿರಿಯ ನಟರಾದ ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಹಾಗೂ ಇತರರು ನಟಿಸಿದ್ದಾರೆ.
ಕೋಮಲ್ ಕುಮಾರ್ ಹೇಳಿದಂತೆ, “ನಾನು ವಜ್ರಮುನಿ ಅವರ ಗೆಟಪ್ ಹಾಕಿದಾಗ ನನಗೆ ನಾನು ಕಾಣಿಸಲಿಲ್ಲ, ವಜ್ರಮುನಿಯೇ ಎದುರು ನಿಂತಿದ್ದಾರೆ ಅನ್ನಿಸಿತು. ಅವರ ಆಶೀರ್ವಾದದಿಂದ ಈ ಪಾತ್ರವನ್ನು ನನಗೆ ನಿರ್ವಹಿಸಲು ಸಾಧ್ಯವಾಯಿತು.”
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಧರ್ಮವಿಶ್ ಅವರ ಸಂಗೀತ ನಿರ್ದೇಶನ, ಹಾಲೇಶ್ ಅವರ ಛಾಯಾಗ್ರಹಣ, ಮತ್ತು ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನ ಸಿನಿಪ್ರಿಯರಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ.
ವಜ್ರಮುನಿ ಅವರ ಪ್ರಸಿದ್ದ ಡೈಲಾಗ್‌ಗಳನ್ನು ಸ್ಮರಿಸಿದ ಆಕರ್ಷ್, ತಮ್ಮ ಪಾತ್ರದ ಬಗ್ಗೆ ಮಾತನಾಡಿ, ತಮ್ಮ ತಾತನ ಪ್ರಭಾವವನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದೇನೆ ಎಂದರು.
“ಯಲಾಕುನ್ನಿ” ಚಿತ್ರವು ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 25ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು, ಪ್ರೇಕ್ಷಕರು ಈ ಚಿತ್ರವನ್ನು ಅತೀವ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.