ಹೇಳಿಕೆ ಹಿಂಪಡೆಯುವಂತೆ ಮುಖ್ಯಮಂತ್ರಿಗಳಿಗೆ ಕೋಟಾ ಶ್ರೀನಿವಾಸ್ ಪೂಜಾರಿ ಪತ್ರ.
ಬೆಂಗಳೂರು: ಉಡುಪಿ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಇಂದು ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ವೈಯಕ್ತಿಕ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಮುಖ್ಯಮಂತ್ರಿಗಳು ಕೋಟಾ ಶ್ರೀನಿವಾಸ್ ಪೂಜಾರಿ ಅವರ ಮೇಲೆ ಮಾಡಿರುವ ಭ್ರಷ್ಟಾಚಾರ ಆರೋಪವನ್ನು ಹಿಂಪಡೆಯುವಂತೆ ಅಥವಾ ಸಿಬಿಐ ತನಿಖೆಗೆ ಭ್ರಷ್ಟಾಚಾರ ಆರೋಪದ ಪ್ರಕರಣವನ್ನು ನೀಡಬೇಕು ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರ ಅಂದರೆ ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿರಬೇಕಾದರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು, ಜುಲೈ 19ರಂದು ನಡೆದ ವಿಧಾನ ಮಂಡಲ ಕಲಾಪದಲ್ಲಿ ಮುಖ್ಯಮಂತ್ರಿಗಳು ಆರೂಪಿಸಿದ್ದರು. ಬಿಜೆಪಿ ಆಡಳಿತದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟ ಶ್ರೀನಿವಾಸ್ ಪೂಜಾರಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿ, “ಹಿಂದಿನ ಸರ್ಕಾರದ ಬಗ್ಗೆ ಆರೋಪ ಮಾಡಿ ಹಿಂದೆ ಸಮಾಜ ಕಲ್ಯಾಣ ಸಚಿವನಾಗಿದ್ದ ನನ್ನ ಬಗ್ಗೆ ಭ್ರಷ್ಟಾಚಾರದ ಆರೋಪ ಹೊರಿಸಿರುತ್ತೀರಿ. ವಾಸ್ತವಿಕವಾಗಿ ಸಮಾಜ ಕಲ್ಯಾಣ ಇಲಾಖೆಯ ಕೊಳವೆ ಬಾವಿ ಟೆಂಡರ್ ಪ್ರಕ್ರಿಯೆ ಬಗ್ಗೆ ನಿಮ್ಮ ಸಂಪುಟದ ಸಚಿವ ಪ್ರಿಯಾಂಕ್ ಖರ್ಗೆ ಸದನದಲ್ಲಿ ಆರೋಪ ಮಾಡಿದಾಗ ಅಂದಿನ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರಲ್ಲಿ ವಿನಂತಿ ಮಾಡಿ, ಸಿ.ಐ.ಡಿ ತನಿಖೆಗೆ ನಾನೇ ಶಿಫಾರಸ್ಸು ಮಾಡಿದ್ದು ತಮ್ಮ ಸರ್ಕಾರದ ಕಡತದಲ್ಲಿದೆ.” ಎಂದು ಹೇಳಿದ್ದಾರೆ.
“ನಾನು ಸಮಾಜ ಕಲ್ಯಾಣ ಸಚಿವನಾಗಿ ಅಧಿಕಾರ ಸ್ವೀಕಾರ ಮಾಡುವ ಮೊದಲು ಕೊಳವೆ ಬಾವಿ, ಡಿಲ್ಲಿಂಗ್ ಮತ್ತು ಪಂಪು ಖರೀದಿ ಒಟ್ಟು ಟೆಂಡರ್ ಪ್ರಕ್ರಿಯೆ ಪ್ರಸ್ಥಾಪವಿತ್ತು. ಟೆಂಡರ್‌ನಲ್ಲಿ ಆಗಬಹುದಾದ ಗೊಂದಲ ನಿವಾರಿಸಲು ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಳವೆ ಬಾವಿ ಫಲಾನುಭವಿಗಳ ರೈತರ ಖಾತೆಗೆ ಹಣವನ್ನು ನೇರ ಜಮಾ ಮಾಡುವ ಡಿ.ಬಿ.ಟಿ ಯೋಜನೆ ನನ್ನ ಅವಧಿಯಲ್ಲಿ ಅನುಷ್ಠಾನಕ್ಕೆ ಬಂದಿರುವುದು ತಾವು ಗಮನಿಸಬೇಕು. ಅಂದರೆ, ಯಾವುದೇ ಟೆಂಡರ್ ಪ್ರಕ್ರಿಯೆ ಮಧ್ಯವರ್ತಿಗಳಿಗೆ ಅವಕಾಶವಿಲ್ಲದೇ ರೈತರು ಯಾವುದೇ ಏಜೆನ್ಸಿ ಮೂಲಕ ಕೊಳವೆ ಬಾವಿ ಕೊರೆಸಿಕೊಂಡರೂ ಅವರ ಖಾತೆಗೆ ನೇರ ಹಣ ಹಾಕುವ ಡಿ.ಬಿ.ಟಿ ಅನುಮೋದನೆ ಮಾಡಿದ್ದು, ನಾನೇ ಎಂಬುದು ತಾವು ಬಲ್ಲಿರಿ.” ಎಂದು ಮುಖ್ಯಮಂತ್ರಿಗಳಿಗೆ ನೆನಪಿಸಿದ್ದಾರೆ.
“ತಮ್ಮ ಹೇಳಿಕೆ ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ತಮ್ಮ ಸರ್ಕಾರಕ್ಕೆ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ, ವಿರೋಧ ಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕೆಂಬ ತಮ್ಮ ನಿಲುವಿನ ಭಾಗವಾಗಿ ಭೋವಿ ನಿಗಮದ ಭ್ರಷ್ಟಾಚಾರದ ವಿಚಾರದಲ್ಲಿ ನನ್ನ ಹೆಸರನ್ನು ಉಲ್ಲೇಖ ಮಾಡಿದ್ದೀರಿ. ವಾಸ್ತವಿಕವಾಗಿ ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ ಹಿಂದೆ ಆಡಳಿತ ನಡೆಸಿದ ತಮ್ಮ ಸರ್ಕಾರದ ಅವಧಿಯಲ್ಲಿ ನೇಮಕ ಮಾಡಿದ ಭೋವಿ ನಿಗಮದ ಅಧಿಕಾರಿಗಳಿಬ್ಬರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆಂದು ಸುದ್ದಿ ಮಾಧ್ಯಮಗಳ ಮೂಲಕ ತಿಳಿಯುತ್ತಲೇ ಸಂಬಂಧಿತರನ್ನು ಅಮಾನತಿನಲ್ಲಿಟ್ಟು ಇಡೀ ಪ್ರಕರಣವನ್ನು ಸಿ.ಐ.ಡಿ ತನಿಖೆಗೆ ವಹಿಸಿದ್ದು ನಾನೇ ಮಂತ್ರಿಯಾಗಿರುವಾಗ ಎನ್ನುವುದು ತಮ್ಮ ಗಮನದಲ್ಲಿದೆ.” ಎಂದು ಕೋಟಾ ಅವರು ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿದ್ದಾರೆ.