ದುಬೈನಲ್ಲಿ “ಕೃಷ್ಣಂ ಪ್ರಣಯ ಸಖಿ”: ಫಿಲ್ಮ್ ನೋಡಿ ಫಿದಾ ಆದ ಕನ್ನಡಿಗರು!

ದುಬೈ: ಶ್ರೀನಿವಾಸರಾಜು ನಿರ್ದೇಶನದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಚಿತ್ರವು ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಇತ್ತೀಚೆಗೆ ದುಬೈಯಲ್ಲೂ ಅದ್ದೂರಿಯಾಗಿ ಪ್ರದರ್ಶನಗೊಂಡಿದೆ. ದುಬೈ ಮತ್ತು ಅಬುಧಾಬಿ ಕನ್ನಡಿಗರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ.
ಅಬುಧಾಬಿ ಮತ್ತು ದುಬೈನಲ್ಲಿ ನಡೆದ ವಿಶೇಷ ಪ್ರದರ್ಶನಕ್ಕೆ ಸುಮಾರು 750ಕ್ಕೂ ಅಧಿಕ ಕನ್ನಡಿಗರು ಬಂದು ಭಾಗವಹಿಸಿ, ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿದರು. ಈ ಕಾರ್ಯಕ್ರಮವನ್ನು ರಶ್ಮಿ ವೆಂಕಟೇಶ್, ಸೆಂದಿಲ್ ಮತ್ತು ಅವರ ತಂಡವು ಆಯೋಜಿಸಿದ್ದು, ಚಿತ್ರತಂಡದ ಪ್ರಮುಖರು, ನಟಿ ಮಾಳವಿಕ ನಾಯರ್, ರಂಗಾಯಣ ರಘು, ನಿರ್ದೇಶಕ ಶ್ರೀನಿವಾಸರಾಜು, ಹಾಗೂ ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ ಸಹ ಭಾಗಿಯಾಗಿದ್ದರು.
ನಟ ಗಣೇಶ್ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದು, “ನಮ್ಮ ಚಿತ್ರಕ್ಕೆ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ಮನ ತುಂಬಿ ಬಂದಿದೆ,” ಎಂದು ಹೇಳಿದರು. ಚಿತ್ರವು ಕನ್ನಡಿಗರ ಮನ ಗೆದ್ದಿದ್ದು, ರಾಜ್ಯಾದ್ಯಂತ ಮತ್ತು ವಿದೇಶದಲ್ಲಿ ಸಹ ಯಶಸ್ವಿ ಪ್ರದರ್ಶನ ಕಾಣುತ್ತಿದೆ.