ಬೆಂಗಳೂರು ಪೋಲಿಸರಿಂದ ವಿನೂತನ ‘ಕೆಎಸ್‌ಪಿ ಆ್ಯಪ್’ ಜಾರಿ. ಈಗ ವಿಡಿಯೋ ಹಾಗೂ ಆಡಿಯೋ ಕರೆ ಮಾಡಿ ದೂರು ನೀಡಬಹುದು.
ಬೆಂಗಳೂರು: ರಾಜ್ಯದಲ್ಲಿ ಅಪರಾಧಗಳನ್ನ ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಇನ್ನಷ್ಟು ವೇಗವಾಗಿ ಕಡಿಮೆಗೊಳಿಸಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಬೆಂಗಳೂರಿನಲ್ಲಿ, ತಂತ್ರಜ್ಞಾನವನ್ನು ಬಳಸಿ ವಿನೂತನ ಆ್ಯಪ್ ಜಾರಿಗೆ ತಂದಿದ್ದಾರೆ. ‘ಕೆಎಸ್‌ಪಿ ಆ್ಯಪ್’ ನಿಮ್ಮ ಸಹಾಯಕ್ಕಾಗಿ ಎಂದಿಗೂ ಸಕ್ರಿಯವಾಗಿರಲಿದೆ.
“ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಆಪತ್ಬಾಂಧವ (ಸೇಫ್ ಕನೆಕ್ಟ್) ಮತ್ತು ಹೊಯ್ಸಳ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಈ ಮೊದಲು ಸಾರ್ವಜನಿಕರು ಅಪಾಯದಲ್ಲಿದ್ದಾಗ 112 ನಂಬರಿಗೆ ಕರೆ ಮಾಡುತ್ತಿದ್ದರು. ಆಗ ಪೊಲೀಸ್ ಇಲಾಖೆಯ ಹೊಯ್ಸಳಗಸ್ತು ವಾಹನ ಸಂಖ್ಯೆ ಹಾಗೂ ಸಿಎಫ್ಎಸ್ ಸಂಖ್ಯೆಯ ಸಂದೇಶ ಹೋಗುತ್ತಿತ್ತು. ಆದರೆ ಇದೀಗ ಈ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲಾಗಿದೆ, ಇನ್ನು ಮುಂದೆ ಕರೆ ಮಾಡಿದ ಸಾರ್ವಜನಿಕರಿಗೆ ಹೊಯ್ಸಳ ಗಸ್ತು ವಾಹನದ ಲೈವ್ ಲೊಕೇಶನ್ ಲಿಂಕನ್ನು ಸಾರ್ವಜನಿಕರ ಮೊಬೈಲಿಗೆ ಕಳುಹಿಸಲಾಗುತ್ತದೆ. ಇದರ ಮೂಲಕ ಹೊಯ್ಸಳ ವಾಹನ ಸಂಚರಿಸುತ್ತಿರುವ ಮಾರ್ಗ, ಅದು ಎಷ್ಟು ದೂರದಲ್ಲಿದೆ, ಹಾಗೂ ಸ್ಥಳಕ್ಕೆ ಬರಲು ಎಷ್ಟು ಸಮಯ ತೆಗೆದುಕೊಳ್ಳಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಆ್ಯಪ್ ಮೂಲಕ ತಿಳಿಯಬಹುದಾಗಿದೆ.