ಲೇಟ್ ಆದರೂ ಲೇಟೆಸ್ಟ್ ಕಥೆ: ಪ್ರಜ್ವಲ್ ದೇವರಾಜ್ ನಟನೆಯ ಟೈಮ್ ಟ್ರಾವೆಲ್ ಥ್ರಿಲ್ಲರ್ ‘ಗಣ’ ಬಿಡುಗಡೆಗೆ ಸಜ್ಜು!

ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸಿರುವ ಟೈಮ್ ಟ್ರಾವೆಲ್ ಥ್ರಿಲ್ಲರ್ ‘ಗಣ’ ಜನವರಿ 31ರಂದು ಕನ್ನಡ ಚಿತ್ರರಂಗದಲ್ಲಿ ಅದ್ದೂರಿಯಾಗಿ ಲಗ್ಗೆ ಇಡುತ್ತಿದೆ. ಎರಡು ಕಾಲಘಟ್ಟಗಳ ಸಸ್ಪೆನ್ಸ್ ಕತೆಯನ್ನು ಟೈಮ್ ಟ್ರಾವೆಲ್ ತಂತ್ರದ ಮೂಲಕ ಬಿಂಬಿಸಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಎರಡು ಕಾಲಘಟ್ಟಕ್ಕೆ ಸೇತುವೆ: ಲ್ಯಾಂಡ್‌ಲೈನ್ ಫೋನ್!
ಈ ಕಥೆ 1993ರ ಕಾಲಘಟ್ಟದಿಂದ ಪ್ರಸ್ತುತಕ್ಕೆ ತಿರುಗುತ್ತದೆ. ಎರಡು ಕಾಲಘಟ್ಟಗಳ ನಡುವಿನ ಹಿನ್ನಲೆಯಲ್ಲಿ ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸುವಂತೆ ಚಿತ್ರವನ್ನು ರೂಪಿಸಲಾಗಿದೆ. ಇದನ್ನು ತೆಲುಗು ಮೂಲದ ನಿರ್ದೇಶಕ ಹರಿಪ್ರಸಾದ್ ಜಕ್ಕ, ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ನಿರೂಪಿಸಿದ್ದಾರೆ.
ಟ್ರೇಲರ್ ಮತ್ತು ಹಾಡುಗಳಿಗೆ ಭರ್ಜರಿ ಸ್ಪಂದನೆ:
ಈ ಚಿತ್ರದಲ್ಲಿ ಅನೂಪ್ ಸೀಳಿನ್ ಅವರು ಸಂಗೀತ ನೀಡಿದ್ದು, ನಾಲ್ಕು ಹಾಡುಗಳನ್ನು ಹೊಂದಿದೆ. ಈಗಾಗಲೇ ಮೂರು ಹಾಡುಗಳು ಯೂಟ್ಯೂಬ್‌ನಲ್ಲಿ ಭರ್ಜರಿ ವೀಕ್ಷಣೆ ಪಡೆಯುತ್ತಿವೆ. ಟ್ರೇಲರ್ ಕೂಡಾ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದು, ಪ್ರೇಕ್ಷಕರು ‘ಗಣ’ಗೆ ತಮ್ಮ ಕಣ್ಣು ನೆಟ್ಟಿದ್ದಾರೆ.
ಕಥೆಯಲ್ಲಿದೆ ಪ್ರೀತಿಯ ಡ್ರಾಮಾ ಮತ್ತು ಥ್ರಿಲ್:
ನಿರ್ಮಾಪಕ ಪಾರ್ಥು ಮಾತನಾಡುತ್ತಾ, “ಇದು ಪಕ್ಕಾ ಕಾಮರ್ಷಿಯಲ್ ಫ್ಯಾಮಿಲಿ ಎಂಟರ್‌ಟೈನರ್. ಕರ್ಮಷಿಯಲ್ ಧಾಟಿಯಲ್ಲಿದ್ದರೂ, ಎರಡು ಕಾಲಘಟ್ಟಗಳ ಕತೆಯೊಂದಿಗೆ ಮಾದರಿಯ ಮನರಂಜನೆ ನೀಡುವುದು ಖಚಿತ. ಅಮ್ಮ-ಮಗನ ಬಾಂಧವ್ಯವೂ ಈ ಚಿತ್ರದ ಬಲಿಷ್ಠ ಅಂಶ,” ಎಂದು ಹೇಳಿದ್ದಾರೆ.
ಕಾಸ್ಟಿಂಗ್ ವಿಶೇಷತೆಗಳು:
ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ರಮೇಶ್ ಭಟ್, ಸಂಪತ್ ರಾಜ್, ಶಿವರಾಜ್ ಕೆ.ಆರ್. ಪೇಟೆ ಮುಂತಾದ ಹಿರಿಯ ನಟರ ಪಾತ್ರಗಳು ಈ ಚಿತ್ರಕ್ಕೆ ಹೊಸ ಬಲ ನೀಡಿವೆ.
ಕನ್ನಡದ ಪ್ರೇಕ್ಷಕರಿಗೆ ಹೊಸದನ್ನು ತರುತ್ತಿರುವ ತೆಲುಗು ತಂಡ:
ತೆಲುಗು ಮೂಲದ ಚೆರಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ ಪಾರ್ಥು, ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಸಿನಿಮಾಗಳನ್ನು ತರುವ ಕನಸು ಹೊಂದಿದ್ದಾರೆ.
ಟೈಮ್ ಟ್ರಾವೆಲ್ ಜಾನರ್‌ನಲ್ಲಿ ಸ್ಯಾಂಡಲ್‌ವುಡ್‌ಗೆ ಹೊಸ ಆಯಾಮ:
‘ಗಣ’ ಸಿನಿಮಾ 75 ದಿನಗಳ ಶೂಟಿಂಗ್ ಬಳಿಕ ಭರ್ಜರಿ ನಿರೀಕ್ಷೆ ಹುಟ್ಟಿಸಿರುವುದು ಗಮನಾರ್ಹ. ಜನವರಿ 31ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಗೊಂಡು, ಪ್ರೇಕ್ಷಕರಿಗೆ ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುವ ಕಥಾನಕ ನೀಡಲಿದೆ.