“ಕಲಿಯುಗದ ಶಕುನಿ ನೀವಲ್ಲದೆ ಮತ್ಯಾರು ಸಿದ್ದರಾಮಯ್ಯನವರೇ?”- ಎಚ್‌ಡಿಕೆ.
ಲೋಕಸಭಾ ಸಮರಕ್ಕೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದು, ಹಳೆ ಮೈಸೂರು ಪ್ರಾಂತ್ಯದಲ್ಲಿ ‘ಗ್ಯಾರಂಟಿ ಸಮಾವೇಶ’ ಕಾರ್ಯಕ್ರಮಗಳ ಮೂಲಕ ಮತದಾರರ ಮತವನ್ನು ಗೆಲ್ಲಲು ಭರ್ಜರಿ ತಯಾರಿ ನಡೆಸಿದೆ.
ಮಂಡ್ಯದಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಮಂಡ್ಯ ಸಂಸದರಾದ ಸುಮಲತಾ ಅವರು ಕಾಂಗ್ರೆಸ್ ವೋಟುಗಳಿಂದ ಗೆದ್ದಿದ್ದು, ಬಿಜೆಪಿಯ ವೋಟುಗಳಿಂದಲ್ಲ.” ಎಂದು ಹೇಳಿದರು.
ಈ ಹೇಳಿಕೆ ವಿರುದ್ಧ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು “ನಿಮ್ಮ ಗೋಮುಖವ್ಯಾಘ್ರತನ ಅರಿಯಲು ಇಷ್ಟು ಸಾಕು. 2019ರ ಲೋಕಸಭಾ ಚುನಾವಣೆಯಲ್ಲಿ, ಅಂದು ಕಾಂಗ್ರೆಸ್ ಮೈತ್ರಿ ಪಕ್ಷ, ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ. ಅವರ ಜೊತೆಯಲ್ಲಿ ಪ್ರಚಾರದ ಸೋಗಿನಾಟವಾಡಿ ಮಾಧ್ಯಮಗಳ ಮುಂದೆ ಗೆಲ್ಲಿಸುತ್ತೇವೆ ಎಂದು ಪೋಸು ಕೊಡುತ್ತಲೇ ನಿಖಿಲ್ ಸುತ್ತಾ ಶಕುನಿವ್ಯೂಹವನ್ನೇ ರಚಿಸಿದ ಕಲಿಯುಗದ ಶಕುನಿ ನೀವಲ್ಲದೆ ಮತ್ಯಾರು ಸಿದ್ದರಾಮಯ್ಯನವರೇ?” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಕುಟುಕಿದ್ದಾರೆ.
ರಾಜ್ಯ ಕಾಂಗ್ರೆಸ್ ತಮ್ಮ ಗ್ಯಾರಂಟಿ ಸಮಾವೇಶಗಳ ಮೂಲಕ ಮತದಾರರ ಬಳಿ ‘ನಾವು ನುಡಿದಂತೆ ನಡೆದಿದ್ದೇವೆ’ ಎಂಬ ಸಂದೇಶವನ್ನು ಸಾರಲು ಬಯಸಿದ್ದಾರೆ. ಈ ಮೂಲಕ ಮೋದಿ ಅಲೆಯನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಕಣಕ್ಕೆ ಇಳಿಸಿದ್ದು, ಕ್ಷೇತ್ರ ಗೆಲ್ಲಲು ತಮ್ಮ ಗ್ಯಾರಂಟಿ ಅಸ್ತ್ರಗಳನ್ನು ಬಳಸುತ್ತಿದೆ ಕಾಂಗ್ರೆಸ್ ಪಕ್ಷ.