ಆರ್‌ಜೆ ಪ್ರದೀಪ “ಮರ್ಯಾದೆ ಪ್ರಶ್ನೆ”! “ಸಕ್ಕತ್ ಸ್ಟುಡಿಯೋ” ಮೊದಲ ಹೆಜ್ಜೆ!
ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದ, ಅಭಿಮಾನಿಗಳಿಗೆ ಗೊಂದಲವುಂಟು ಮಾಡಿದ್ದ ʼಮರ್ಯಾದೆ ಪ್ರಶ್ನೆʼಗೆ ಇದೀಗ ಉತ್ತರ ಸಿಕ್ಕಿದೆ. ಇದೊಂದು ಸಿನೆಮಾ ಟೈಟಲ್! ಹೀಗೊಂದು ವಿಶೇಷ ಮತ್ತು ಗಮನಾರ್ಹ ಶೀರ್ಷಿಕೆಯನ್ನು ಇಟ್ಟುಕೊಂಡು ತೆರೆ ಮೇಲೆ ಬರೋಕೆ ಸಜ್ಜಾಗ್ತಿದೆ ಆರ್‌ಜೆ ಪ್ರದೀಪ ಮತ್ತು ತಂಡ. ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಬೆಂಗಳೂರಿನ ಮಧ್ಯಮ ವರ್ಗದ ಬದುಕನ್ನು ನೈಜವಾಗಿ ದಾಖಲಿಸುವ ಪ್ರಯತ್ನ ಇದು ಎಂದು ಚಿತ್ರತಂಡ ಹೇಳಿದೆ. ಪೋಸ್ಟರ್‌ನಲ್ಲಿರುವ “ದುಡ್ಡಿರೋರಿಗೆ ಎಲ್ಲಾ.. ದುಡಿಯೋರಿಗೆ ಏನೂ ಇಲ್ಲಾ..” ಎಂಬ ಸಾಲು ಸಾಕಷ್ಟು ಗಮನ ಸೆಳೆದಿದೆ.
ಸಕ್ಕತ್ ಸ್ಟುಡಿಯೋ ಬ್ಯಾನರ್ ಅಡಿ ಆರ್‌ಜೆ ಪ್ರದೀಪ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ. ಸಂಚಾರಿ ವಿಜಯ್ ಅಭಿನಯದ “ಪುಕ್ಸಟ್ಟೆ ಲೈಫು” ಸಿನೆಮಾಗೆ ಬಂಡವಾಳ ಹೂಡಿದ್ದ ನಾಗರಾಜ ಸೋಮಯಾಜಿ ಈ ಚಿತ್ರದ ನಿರ್ದೇಶಕ. ಕನ್ನಡದಲ್ಲಿ ಅನೇಕ ವೆಬ್ ಸಿರೀಸ್‌ಗಳನ್ನು ನಿರ್ಮಿಸಿ, ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಸಕ್ಕತ್ ಸ್ಟುಡಿಯೋ ʼಮರ್ಯಾದೆ ಪ್ರಶ್ನೆʼ ಸಿನೆಮಾ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದೆ.
ಮರ್ಯಾದೆ ಪ್ರಶ್ನೆ – ನನ್ನ ಮೊದಲ ಹೆಜ್ಜೆ ಸಕ್ಕತ್ ಸ್ಟುಡಿಯೋ ಅಂತ ಹೆಸರಿಟ್ಟು ಸಕ್ಕತಾಗಿರೋ ಸಿನಿಮಾ ಮಾಡ್ಲಿಲ್ಲಾ ಅಂದ್ರೆ.. ಮರ್ಯಾದೆ ಪ್ರಶ್ನೆ!! ಜೊತೆಗಿರಿ Always” ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪ್ರದೀಪ ಹಂಚಿಕೊಂಡಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ತಂಡ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಐದಾರು ಕಲಾವಿದರು ಮುಖ್ಯಪಾತ್ರದಲ್ಲಿ ನಟಿಸಿಲಿದ್ದಾರೆ, ಇದೊಂದು ಡ್ರಾಮಾ ಥ್ರಿಲ್ಲರ್, ಬೇಸಿಕ್ ರಿವೆಂಜ್ ಜಾನರ್ ಎಂದು ನಿರ್ದೇಶಕರು ತಿಳಿಸಿದರು. ಯಾರೆಲ್ಲ ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ರಿಲೀಸ್ ಯಾವಾಗ ಎಂಬುದು ಸದ್ಯಕ್ಕೆ ಸಸ್ಪೆನ್ಸ್..!