ಸ್ಯಾಂಡಲ್‌ವುಡ್ ಸೆಲೆಬ್ರಿಟೀಸ್‌ಗೆ ಕಾಡ್ತಿದೆ ʼಮರ್ಯಾದೆ ಪ್ರಶ್ನೆʼ!
ಸೋಷಿಯಲ್ ಮೀಡಿಯಾದಲ್ಲಿ ಏಕಾಏಕಿ ಟ್ರೆಂಡ್ ಆಗ್ತಿದೆ ಮರ್ಯಾದೆ ಪ್ರಶ್ನೆ! ಕಳೆದೆರಡು ದಿನಗಳಿಂದ ಅನೇಕ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಮರ್ಯಾದೆ ಪ್ರಶ್ನೆ ಏನು ಎಂಬುದನ್ನು ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡ್ತಿದಾರೆ..! ಆದರೆ ಇದೆಲ್ಲ ಯಾಕೆ..? ಇದೆಲ್ಲ ಏನು?
ಹೀಗೆ ಏಕಾಏಕಿ ಸೆಲಿಬ್ರಿಟೀಸ್ ʼಮರ್ಯಾದೆ ಪ್ರಶ್ನೆʼ ಅಂತ ತಲೆಕೆಡಿಸಿಕೊಂಡಿರೋದು ಯಾಕೆ ಅನ್ನೋದು ತಿಳಿಯದೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ, ನಟಿ ನಿಶ್ವಿಕಾ ನಾಯ್ಡು, ಚೈತ್ರ ಆಚಾರ್, ಸಂಯುಕ್ತಾ ಹೊರನಾಡು, ಗಾನವಿ ಲಕ್ಷ್ಮಣ್, ನಟ ನಾಗಭೂಷಣ್, ಶೈನ್ ಶೆಟ್ಟಿ, ನಿರೂಪಕ ನಿರಂಜನ್ ದೇಶಪಾಂಡೆ ಮುಂತಾದವರು ಇದೇ ವಿಷಯವಾಗಿ ಬರೆದುಕೊಂಡಿದ್ದಾರೆ.
ನಟಿ ಚೈತ್ರ ಆಚಾರ್ “ನಾನು ಬಕೆಟ್ ಹಿಡಿಯಲ್ಲ ಗುರು ಮರ್ಯಾದೆ ಪ್ರಶ್ನೆ” ಎಂದು ಖಾರವಾಗಿ ಪೋಸ್ಟ್ ಮಾಡಿದರೆ, ಇತ್ತೀಚಿಗೆ ಬಿಡುಗಡೆಯಾಗಿ ಭಾರಿ ಟ್ರೆಂಡ್ ಆಗಿದ್ದ ಕರಟಕ ದಮನಕ ಸಿನೆಮಾದ ಹಾಡು “ಹಿತ್ತಲಕ ಕರಿಬ್ಯಾಡ ಮಾವ”.. ಸಾಲನ್ನು ಇಟ್ಟುಕೊಂಡು ನಿಶ್ವಿಕಾ ನಾಯ್ಡು “ಹಿತ್ತಲಕ ಕರಿಬ್ಯಾಡ ಮಾವ ಮರ್ಯಾದೆ ಪ್ರಶ್ನೆ” ಎಂದು ತಮ್ಮ ಇನ್ಸ್‌ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. , ಮಗಳು ಜಾನಕಿ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್ “ಕತೆ ಓಕೆ ಅನ್ಸಿದ್ರೂ ಸಿನಿಮಾ ದುಡ್ಡಿಗೋಸ್ಕರ ಒಪ್ಪಿಕೊಂಡ್ರೆ ಮರ್ಯಾದೆ ಪ್ರಶ್ನೆ” ಎಂದು ಪೋಸ್ಟ್ ಮಾಡಿದ್ದಾರೆ.
ಮಾರ್ಚ್ 22ರಂದು ನಿರ್ದೇಶಕ ಸಿಂಪಲ್ ಸುನಿ ಮತ್ತು ಶರಣ್ ಕಾಂಬಿನೇಷನ್‌ನ ಬಹುನಿರೀಕ್ಷಿತ “ಅವತಾರ ಪುರುಷ 2” ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ಸುನಿ “ಅವತಾರ ಪುರುಷ 2 ಗೆಲ್ಲಲೇಬೇಕು ಮರ್ಯಾದೆ ಪ್ರಶ್ನೆ” ಎಂದು ಬರೆದುಕೊಂಡಿದ್ದಾರೆ. ನಟ ಶೈನ್ ಶೆಟ್ಟಿ “ಅವರದು ಆಯ್ತಂತೆ ನಿಮ್ಮದು ಯಾವಾಗ ಮರ್ಯಾದೆ ಪ್ರಶ್ನೆ” ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ, ದೀಪಿಕಾ ದಾಸ್ ಇತ್ತೀಚಿಗೆ ಮದುವೆಯಾದ ಹಿನ್ನೆಲೆಯಲ್ಲಿ ಈ ಪೋಸ್ಟ್ ಎಂದು ಅನುಮಾನ ಮೂಡುತ್ತಿದೆ.. ಹೀಗೆ ಒಬ್ಬೊಬ್ಬರು ಒಂದೊಂದು ಪೋಸ್ಟ್ ಮಾಡ್ತಿರೋದು ಫ್ಯಾನ್ಸ್‌ಗಳಿಗೆ ತಲೆಬಿಸಿಯಾಗಿದೆ. ಸೆಲೆಬ್ರಿಟಿಗಳ ಈ ಪೋಸ್ಟ್‌ಗಳಿಗೆ ಕಮೆಂಟ್ ಮಾಡುತ್ತಿರುವ ಫ್ಯಾನ್ಸ್, ಏನಿದು ಮರ್ಯಾದೆ ಪ್ರಶ್ನೆ ಅರ್ಥವಾಗ್ತಿಲ್ಲ ಎಂದು ಗೊಂದಲಕ್ಕೀಡಾಗಿದ್ದಾರೆ..
ಇದೆಲ್ಲದರ ನಡುವೆ ಐಪಿಎಲ್ ಫೀವರ್ ಶುರು ಆಗ್ತಿರೋ ಹೊತ್ತಲ್ಲಿ “ಈ ಸಲ ಕಪ್ ಗೆಲ್ಲಬೇಕು ಮರ್ಯಾದೆ ಪ್ರಶ್ನೆ” ಎಂದು ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ್ದಾರೆ..
ʼಮರ್ಯಾದೆ ಪ್ರಶ್ನೆʼ – ಇದು ಸಿನೆಮಾದ ಟೈಟಲ್ ಆಗಿರಬಹುದಾ? ಇದು ಸಿನೆಮಾ ಪ್ರಮೋಷನ್ ಗಿಮಿಕ್ಕಾ? ಟೈಟಲ್ ಅನಾವರಣಕ್ಕೂ ಮುನ್ನ ಸೆಲೆಬ್ರಿಟಿಗಳು ಹೀಗೆ ಟ್ರೆಂಡ್ ಮಾಡ್ತಿರಬಹುದಾ? ಅಥವಾ ಸೆಲೆಬ್ರಿಟಿಗಳಿಗೆ ನಿಜಕ್ಕೂ ಈ ಪ್ರಶ್ನೆ ಕಾಡ್ತಿದ್ಯಾ? ಇನ್ನೂ ಯಾವ್ಯಾವ ಸೆಲೆಬ್ರಿಟಿಗಳು ಈ ಮರ್ಯಾದೆ ಪ್ರಶ್ನೆ ಎತ್ತಬಹುದು..? ಮುಂತಾದ ಗೊಂದಲಗಳಿಗೆ ಉತ್ತರ ದೊರೆಯಬೇಕಾದರೆ ಕೆಲವು ದಿನಗಳವರೆಗೆ ಕಾಯಲೇಬೇಕು..!