ಚೆನ್ನೈ: ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಶೋಷಣೆ ಹಿನ್ನೆಲೆಯಲ್ಲಿ, ಇಂಟರ್ನೆಟ್ ಬಳಕೆದಾರರು ಮತ್ತು ಕೆಲವು ರಾಜಕೀಯ ಗುಂಪುಗಳು ಭಾರತ-ಬಾಂಗ್ಲಾ ಕ್ರಿಕೆಟ್ ಸರಣಿಯನ್ನು ತಕ್ಷಣವೇ ರದ್ದುಗೊಳಿಸಲು ಆಗ್ರಹಿಸುತ್ತಿವೆ. ಚೆನ್ನೈಯಲ್ಲಿ ಹಿಂದೂ ಮಕ್ಕಳ ಕಚ್ಚಿ (HMK) ಪಕ್ಷವು ಸರಣಿಯನ್ನು ರದ್ದುಗೊಳಿಸಲು ಪ್ರತಿಭಟನೆ ನಡೆಸಿದ್ದು, ಪಕ್ಷದ ಮುಖ್ಯಸ್ಥ ಅರ್ಜುನ್ ಸಂಪತ್ ಆಂದೋಲನವನ್ನು ಮುನ್ನಡೆಸಿದರು.
ಪ್ರತಿಭಟನೆಯ ಸಂದರ್ಭ, ಅರ್ಜುನ್ ಸಂಪತ್ ಮಾಧ್ಯಮಗಳೊಂದಿಗೆ ಮಾತನಾಡಿ, “ಬಾಂಗ್ಲಾದೇಶದಲ್ಲಿ ಹಿಂದೂಗಳ ಜನಸಂಖ್ಯೆ 26% ಇತ್ತು, ಆದರೆ ಅದು ಇತ್ತೀಚಿನ ದಿನಗಳಲ್ಲಿ ಕೇವಲ 7% ರಷ್ಟಾಗಿದ್ದು, ಅನೇಕ ದೇವಾಲಯಗಳು ನಾಶಮಾಡಲಾಗಿದೆ,” ಎಂದು ಆರೋಪಿಸಿದರು. ಹಿಂದೂ ಸಮುದಾಯದ ರಕ್ಷಣೆಯ ದೃಷ್ಟಿಯಿಂದ ಬಾಂಗ್ಲಾದೇಶ ವಿರುದ್ಧದ ಕ್ರಿಕೆಟ್ ಸರಣಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಈ ಮಧ್ಯೆ, ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ಮಶ್ರಾಫೆ ಮೊರ್ತಾಜಾ ಹಾಗೂ ಆಟಗಾರ ಲಿಟ್ಟನ್ ದಾಸ್ ಅವರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂಬ ಆಘಾತಕಾರಿ ವರದಿಯೂ ಹರಿದಾಡುತ್ತಿದೆ.