ಕೋವಿಡ್ ಅವ್ಯವಹಾರದ ಬೃಹತ್ ಹಗರಣ: ಕುನ್ನಾ ಆಯೋಗದ ವರದಿಯಲ್ಲಿ ಏನಿದೆ..?!

ಬೆಂಗಳೂರು: ಕೋವಿಡ್ – 19 ಸಾಂಕ್ರಾಮಿಕ ಸಮಯದಲ್ಲಿ ನಡೆದಿರಬಹುದಾದ ಭಾರೀ ಅವ್ಯವಹಾರಗಳ ತನಿಖೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ನಾ ಅವರ ನೇತೃತ್ವದ ವಿಚಾರಣಾ ಆಯೋಗವು ತನ್ನ ಮೊದಲ ರಹಸ್ಯಭರಿತ ವರದಿ ನೀಡಿದ್ದು, ರಾಜ್ಯದ ಆಡಳಿತಕ್ಕೆ ಹೊಸ ತಲೆನೋವನ್ನುಂಟು ಮಾಡಿದೆ. ಬಹಿರಂಗಗೊಂಡ ವರದಿಯ ಪ್ರಕಾರ, ಬೃಹತ್ ಪ್ರಮಾಣದ ಅವ್ಯವಹಾರ ನಡೆದಿರುವುದಾಗಿ ಉಲ್ಲೇಖವಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತೀವ್ರವಾಗಿ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯ ಗಂಭೀರತೆಯನ್ನು ಪರಿಗಣಿಸಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿರುವುದಾಗಿ ಘೋಷಿಸಿದ್ದಾರೆ. “ಹಗರಣದ ಗಾತ್ರವನ್ನು ಕಂಡು ಜನತೆಗೆ ಅಚ್ಚರಿ ಉಂಟಾಗಬಹುದು, ಆದರೆ ಸರ್ಕಾರವು ನ್ಯಾಯಯುತ ಕ್ರಮಗಳನ್ನು ಕೈಗೊಳ್ಳಲಿದೆ,” ಎಂದು ಸಿಎಂ ಹೇಳಿದರು.
ಈ ವರದಿ ಹೊರ ಬೀಳುತ್ತಿದ್ದಂತೆ, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ಶುರುವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದು ಕುತೂಹಲದ ವಿಚಾರವಾಗಿದೆ.