ಫೆಬ್ರವರಿ 08, ಗುರುವಾರ ನೆರೆಯ ರಾಷ್ಟ್ರ ಪಾಕಿಸ್ತಾನ ತನ್ನ 16ನೇ ಸಾರ್ವತ್ರಿಕ ಚುನಾವಣೆ ನಡೆಸುತ್ತಿದೆ. ಆದರೆ ಸಂಪೂರ್ಣ ದೇಶದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತವಾಗಿರುವುದು ಪಾರದರ್ಶಕ ಚುನಾವಣೆಯಲ್ಲಿ ಮೊಸ ನಡೆಯುವ ಮುನ್ಸೂಚನೆ ಎಂಬಂತೆ ಭಾಸವಾಗುತ್ತಿದೆ. ಈ ಮಧ್ಯೆ ಟ್ಯಾಂಕ್ ಪ್ರಾಂತ್ಯದ ಮತದಾನ ಕೇಂದ್ರದ ಮೇಲೆ ಗುಂಡಿನ ದಾಳಿ ನಡೆದಿದ್ದು ಓರ್ವ ಪೋಲಿಸ್ ಸಿಬ್ಬಂದಿ ಅಸುನೀಗಿದ್ದಾನೆ.
241 ಮಿಲಿಯನ್ ಜನಸಂಖ್ಯೆ ಇರುವ ಪಾಕಿಸ್ತಾನದಲ್ಲಿ 128 ಮಿಲಿಯನ್ ಜನಸಂಖ್ಯೆ ಮತ ನೀಡಲು ಅರ್ಹರಾಗಿದ್ದಾರೆ. ಒಟ್ಟು 336 ಸ್ಥಾನಗಳಲ್ಲಿ 266 ಸ್ಥಾನಗಳಲ್ಲಿ ನೇರ ಮತದಾನವಾಗಲಿದೆ. ಉಳಿದಂತೆ 60 ಸ್ಥಾನಗಳನ್ನು ಮಹಿಳೆಯರಿಗೆ ಮತ್ತು 10 ಸ್ಥಾನಗಳನ್ನು ಮುಸ್ಸಿಂಯೇತರರಿಗೆ ಕಾಯ್ದಿರಿಸಲಾಗಿದೆ.
ಒಟ್ಟು 90,582 ಮತದಾನ ಕೇಂದ್ರಗಳಿದ್ದು, 2,76,402 ಮತಗಟ್ಟೆಗಳಿವೆ. 167 ಪಕ್ಷಗಳು ಪಾಕಿಸ್ತಾನದ ಚುನಾವಣಾ ಆಯೋಗದಲ್ಲಿ ನೊಂದಾಯಿಸಲ್ಪಟ್ಟಿವೆ. ಹಿಂದಿನ ಬಾರಿ 2018ರಲ್ಲಿ ಒಟ್ಟು ಕೇವಲ 51.9% ಓಟು ದಾಖಲಾಗಿತ್ತು. 2018ರಲ್ಲಿ 116 ಸ್ಥಾನಗಳನ್ನು ಪಡೆದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರಿಕ್-ಎ-ಇನ್ಸಾಫ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಈ ಬಾರಿಯ ಚುನಾವಣೆಯಲ್ಲಿ 5,96,618 ಸಶಸ್ತ್ರ ಪಡೆ ಸೈನಿಕರನ್ನು ಮತಗಟ್ಟೆಗಳ ರಕ್ಷಣೆಗೆಂದು ನಿಯೋಜಿಸಲಾಗಿದೆ.
ಅರಾಜಕತೆ, ಆರ್ಥಿಕ ದಿವಾಳಿಗೆ ತುತ್ತಾದ ಪಾಕಿಸ್ತಾನದ ಹಣೆಬರಹ ಈ ಚುನಾವಣೆಯ ನಂತರವಾದರೂ ಬದಲಾಗುವ ಸಾಧ್ಯತೆ ಇದೆಯೇ ಎಂಬುದನ್ನು ಕಾದು ನೋಡಬೇಕಿದೆ.