Politics

ಮುಡಾ ಹಗರಣ: “ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ” ಎಂದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ಆರೋಪಗಳನ್ನು ಖಂಡಿಸುತ್ತಾ, ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ರಾಜೀನಾಮೆ ನೀಡುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜೀನಾಮೆ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಾನು ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆ ನೀಡಬೇಕಾದ ಅವಶ್ಯಕತೆಯೇ ಇಲ್ಲ. ಹಲವು ಬಿಜೆಪಿ ನಾಯಕರು ಜಾಮೀನಿನಲ್ಲಿ ಇದ್ದಾರೆ, ಅದರಿಂದ ಅವರಿಗೆ ನಾಚಿಕೆ ಆಗುವುದಿಲ್ಲವೇ? ಅವರಲ್ಲಿ ಯಾರಾದರೂ ರಾಜೀನಾಮೆ ಕೊಟ್ಟಿದ್ದಾರೆಯೇ?” ಎಂದು ಪ್ರಶ್ನೆ ಎತ್ತಿದರು.

ಹಗರಣದ ತನಿಖೆಗೆ ಸಿದ್ಧತೆ:

ಮುಡಾ ಹಗರಣ ಸಂಬಂಧ ಕೋರ್ಟ್ ಎಫ್‌ಐಆರ್ ದಾಖಲಿಸಿ ಲೋಕಾಯುಕ್ತ ಪೊಲೀಸ್ ತನಿಖೆಗೆ ಆದೇಶ ನೀಡಿದ ನಂತರ, ಸಿಎಂ ಸಿದ್ದರಾಮಯ್ಯ ಅವರು, “ಕೋರ್ಟ್ ಆದೇಶವನ್ನು ಪರಿಶೀಲಿಸುತ್ತೇನೆ, ನಾನು ಕಾನೂನು ಸಮರಕ್ಕೆ ಸಿದ್ಧ” ಎಂದು ಪ್ರತಿಕ್ರಿಯೆ ನೀಡಿದರು.

ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಬೇಡಿಕೆಯ ಬಗ್ಗೆ ಸ್ಪಷ್ಟನೆ ನೀಡುತ್ತಾ, “ಸಿದ್ದರಾಮಯ್ಯನವರು ರಾಜೀನಾಮೆ ಕೊಡಲ್ಲ” ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಪ್ರತಿಭಟನೆ ತೀವ್ರ:

ರಾಜೀನಾಮೆ ಒತ್ತಾಯಿಸುತ್ತಾ, ಬಿಜೆಪಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಇಂದು ವಿಧಾನಸೌಧದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಧರಣಿ ನಡೆಸಲು ಮುಂದಾಯಿತು. ಹೀಗಾಗಿ, ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ, ಸಿಎಂ ಸಿದ್ದರಾಮಯ್ಯ ಅವರು ಕಾನೂನು ಸಲಹೆಗಾರರೊಂದಿಗೆ ಮಹತ್ವದ ಸಭೆ ನಡೆಸಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button