ಅಂತರರಾಷ್ಟ್ರೀಯ ಮಟ್ಟದಲ್ಲಿ “ಮೈ ಹೀರೋ” ಚಿತ್ರ: ಎಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಎಂದು ಗೊತ್ತೇ..?!
ಬೆಂಗಳೂರು: ಎ.ವಿ. ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕ ಅವಿನಾಶ್ ವಿಜಯಕುಮಾರ್ ಅವರ “ಮೈ ಹೀರೋ” ಚಿತ್ರ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಗುರುತನ್ನು ಸೃಷ್ಟಿಸಿದೆ. ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸುವುದರ ಜೊತೆಗೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಲ್ಲಿ ಕೂಡ ಗುರುತು ಮೂಡಿಸಿದೆ.
ಈ ಸಿನಿಮಾವನ್ನು ಟೋಕಿಯೋ ಇಂಟರ್ನ್ಯಾಷನಲ್ ಸಿನಿಮಾ ಅವಾರ್ಡ್ಸ್, ಸ್ಯಾನ್ ಡಿಯೆಗೋ ಇಂಡಿಪೆಂಡೆಂಟ್ ಸಿನಿಮಾ ಅವಾರ್ಡ್ಸ್, MIAFF 2024, ನ್ಯೂಯಾರ್ಕ್ ಫಿಲಂ & ಸಿನಿಮೆಟೊಗ್ರಾಫಿ ಅವಾರ್ಡ್ಸ್, ಸ್ವಿಡನ್ ಫಿಲಂ ಅವಾರ್ಡ್ಸ್, ಬ್ಯಾಂಗ್ಕಾಕ್ ಮೂವೀ ಅವಾರ್ಡ್ಸ್, ವೆಸ್ಟರ್ನ್ ಕೆನಡಿಯನ್ ಇಂಟರ್ನ್ಯಾಷನಲ್ ಅವಾರ್ಡ್ಸ್ ಮೊದಲಾದ ವೇದಿಕೆಗಳಲ್ಲಿ ಪ್ರಶಸ್ತಿ ಗೆದ್ದು ಶ್ರೇಷ್ಟತೆಯನ್ನು ಸಾಧಿಸಿದೆ. ವಿಶೇಷವಾಗಿ “ಬೆಸ್ಟ್ ಫ್ಯೂಚರ್ ಫಿಲ್ಮ್” ಮತ್ತು “ಬೆಸ್ಟ್ ಡೈರೆಕ್ಟರ್” ಪ್ರಶಸ್ತಿಗಳನ್ನು ಗಿಟ್ಟಿಸಿದ್ದು ಚಿತ್ರತಂಡದ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬಾಲನಟ ವೇದಿಕ್ ಕೌಶಿಕ್ ಮತ್ತು ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ದತ್ತಣ್ಣ, ಪ್ರಕಾಶ್ ಬೆಳವಾಡಿ, ನಿರಂಜನ್ ದೇಶಪಾಂಡೆ, ತನುಜಾ ಕೃಷ್ಣಪ್ಪ ಮೊದಲಾದವರು ತಮ್ಮ ಅಚ್ಚುಕಟ್ಟಾದ ಅಭಿನಯದ ಮೂಲಕ ಚಿತ್ರಕ್ಕೆ ಜೀವ ತುಂಬಿದ್ದಾರೆ.
ಸಂಗೀತ, ಛಾಯಾಗ್ರಹಣ ಮತ್ತು ಸಂಭಾಷಣೆ: ಗಗನ್ ಬಡೇರಿಯಾ ಅವರ ಸಂಗೀತ, ವೀನಸ್ ನಾಗರಾಜ್ ಅವರ ಛಾಯಾಗ್ರಹಣ ಮತ್ತು ಅವಿನಾಶ್ ವಿಜಯಕುಮಾರ್ ಅವರ ಸಂಭಾಷಣೆಗಳು ಚಿತ್ರವನ್ನು ಇನ್ನಷ್ಟು ಸ್ಫೂರ್ತಿದಾಯಕ ಮಾಡಿದೆ.
ಚಿತ್ರತಂಡದ ಹೇಳಿಕೆ: “ಚಿತ್ರದ ಯಶಸ್ಸು ನಮ್ಮ ತಂಡದ ಶ್ರಮ ಮತ್ತು ಪ್ರೇಕ್ಷಕರ ಪ್ರೀತಿಯ ಫಲಿತಾಂಶ,” ಎಂದು ಅವಿನಾಶ್ ವಿಜಯಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರ ಇನ್ನಷ್ಟು ಫೆಸ್ಟಿವಲ್‌ಗಳಲ್ಲಿ ಪ್ರದರ್ಶನಗೊಳ್ಳಲಿದ್ದು, “ಮೈ ಹೀರೋ” ಕನ್ನಡ ಚಲನಚಿತ್ರೋದ್ಯಮದ ಹೆಮ್ಮೆ ಹೆಚ್ಚಿಸಲಿದೆ.