ಬಿಬಿಎಂಪಿಯಲ್ಲಿ “ನಂಬಿಕೆ ನಕ್ಷೆ” ಯೋಜನೆ: ಬೆಂಗಳೂರು ನಾಗರಿಕರಿಗೆ ಸುಗಮ ಅನುಮೋದನೆ ಪ್ರಕ್ರಿಯೆ!
ಬೆಂಗಳೂರು: ನಗರದಲ್ಲಿ ಮನೆ ನಿರ್ಮಾಣ ಮತ್ತು ನವೀಕರಣದ ಅನುಮೋದನೆ ಪ್ರಕ್ರಿಯೆಯಲ್ಲಿ ಸುಧಾರಣೆ ತರಲು “ನಂಬಿಕೆ ನಕ್ಷೆ” ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಹೇಳಿದ್ದಾರೆ.
ಯೋಜನೆಯ ವಿವರಣೆ: ಈ ಯೋಜನೆ ಪ್ರಕಾರ, 50/80 ವಿಸ್ತೀರ್ಣದ ವರೆಗೆ ಇರುವ ನಿವೇಶನಗಳ ಮಾಲೀಕರು, ಅನುಮೋದಿತ ಎಂಜಿನಿಯರ್ ಅಥವಾ ಕಟ್ಟಡ ವಿನ್ಯಾಸಕಾರರಿಂದ ನಕ್ಷೆಯನ್ನು ಅನುಮೋದನೆ ಪಡೆದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಟ್ಟಡದ ಅನುಮೋದನೆ ಪಡೆಯಬಹುದಾಗಿದೆ. ಇದರಿಂದ ಬಿಬಿಎಂಪಿಗೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ, ಈ ಯೋಜನೆ ಮೂಲಕ ಅನುಮತಿ ಪ್ರಕ್ರಿಯೆ ವೇಗವಾಗಿ ಮುಗಿಯಲಿದೆ. ಪ್ರಸ್ತುತ, ಯೋಜನೆಯನ್ನು ನಗರದ ಎಲ್ಲಾ ವಲಯಗಳಲ್ಲಿ ವಿಸ್ತರಿಸಲಾಗಿದೆ.
ರಸ್ತೆ ಗುಂಡಿ ಮತ್ತು ಸುಧಾರಣಾ ಕಾರ್ಯ: ಬೆಂಗಳೂರು ನಗರದಲ್ಲಿ 2,795 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ, ಮತ್ತು ಮುಂದಿನ 15 ದಿನಗಳಲ್ಲಿ ಇವುಗಳನ್ನು ಮುಚ್ಚಲು ಸೂಚಿಸಲಾಗಿದೆ. ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡಲು ರೂ. 660 ಕೋಟಿ ವೆಚ್ಚವನ್ನು ಮೀಸಲಿಡಲಾಗಿದೆ.
ರಾಜಕಾಲುವೆ ಯೋಜನೆ ಮತ್ತು ಪರಿಹಾರ: 300 ಕಿ.ಮೀ. ರಾಜಕಾಲುವೆಯ ಸುತ್ತ 30 ಅಡಿ ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ 100 ಕಿ.ಮೀ. ಪ್ರಥಮ ಹಂತದಲ್ಲಿ ರೂ. 200 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ರಾಜಕಾಲುವೆಯ 50 ಮೀ. ಸುತ್ತಕ್ಕೆ ಯಾವುದೇ ನಿರ್ಮಾಣ ಕಾರ್ಯಕ್ಕೆ ನಿರ್ಬಂಧವಿದ್ದು, ನಿಯಮಗಳ ಪ್ರಕಾರ ನಿರ್ವಹಣೆ ಮಾಡಲಾಗುವುದು.
ಸ್ವಚ್ಚತಾ ಅಭಿಯಾನ ಮತ್ತು ಗಾಂಧಿ ಜಯಂತಿ: ಮಹಾತ್ಮಾ ಗಾಂಧಿ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು 100 ವರ್ಷಗಳ ಪೂರೈಕೆ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳು ಆನ್‌ಲೈನ್ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ, ಮತ್ತು ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.