ರಾಷ್ಟ್ರೀಯ ಕ್ರೀಡಾ ದಿನ: ಹಿಟ್ಲರ್ ಆಫರ್‌ನ್ನು ದ್ಯಾನ್ ಚಂದ್ ನಿರಾಕರಿಸಿದ್ದು ಯಾಕೆ..?!
ನವದೆಹಲಿ: 1936ರ ಒಲಿಂಪಿಕ್ಸ್, ಇದು ಕೇವಲ ಒಂದು ಕ್ರೀಡಾ ಸ್ಪರ್ಧೆಯಷ್ಟೇ ಆಗಿರಲಿಲ್ಲ, ಭಾರತ ಮತ್ತು ಜರ್ಮನಿಯ ನಡುವೆ ನಡೆದ, ಎಂದು ಮರೆಯಲಾಗದ ಹಾಕಿ ಕಸರತ್ತು ಕೂಡ ಆಗಿತ್ತು. ಜರ್ಮನಿಯ ಹಿಟ್ಲರ್ ಮತ್ತು ಅವರ ನಾಜಿ ಸಿದ್ದಾಂತವನ್ನು ವಿಶ್ವದ ಮುಂದೆಯೇ ತೋರಿಸಲು ಆಯೋಜಿಸಲಾಗಿದ್ದ ಈ ಒಲಿಂಪಿಕ್ಸ್, ಭಾರತದ ಹಾಕಿ ತಂಡದ ನಾಯಕ ಧ್ಯಾನ್ ಚಂದ್ ಅವರ ಜೀವನದಲ್ಲಿ ಹಾಗೆಯೇ ಭಾರತದ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಇರುವಂತೆ ಮಾಡಿತು.
ಅಗಸ್ಟ್ 15, 1936, ಭಾರತ ಮತ್ತು ಜರ್ಮನಿ ಹಾಕಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಮೊದಲ ಅರ್ಧದಲ್ಲಿ ಜರ್ಮನಿಯು ಒಂದು ಗೋಲ್ ಮಾಡಿ ಮುನ್ನಡೆಸಿತು. ಭಾರತದ ನಾಯಕ ಧ್ಯಾನ್ ಚಂದ್ ಅವರಿಗೆ ತೀವ್ರ ಗಾಯಗಳಾಗಿದ್ದರೂ, ಅವರು ಕ್ರೀಡಾಂಗಣಕ್ಕೆ ಮರಳಿ ಬರುತ್ತಿದ್ದಂತೆ, ಹಿಟ್ಲರ್ ತನ್ನ ಧೈರ್ಯ ಬಿಟ್ಟು ನೇರವಾಗಿ ತಮ್ಮ ಸ್ಥಾನದಿಂದ ಎದ್ದು ಹೋಗಿದ್ದನ್ನು ಕಂಡು ಎಲ್ಲರೂ ಆಶ್ಚರ್ಯ ಚಕಿತರಾದರು. ಅಂತಿಮವಾಗಿ ಭಾರತ 8-1ರಿಂದ ಜರ್ಮನಿಯನ್ನು ಸೋಲಿಸಿತು.
ಹಿಟ್ಲರ್‌ನ ಆಫರ್ ಮತ್ತು ಧ್ಯಾನ್ ಚಂದ್ ಅವರ ನಿರಾಕರಣೆ:
ಅಂದು ಸಂಜೆ ನಡೆದ ಸರಳ ಸಮಾರಂಭದಲ್ಲಿ, ಹಿಟ್ಲರ್ ಅವರು ಧ್ಯಾನ್ ಚಂದ್ ಅವರನ್ನು ಭೇಟಿಯಾಗಿ, ಜರ್ಮನ್ ಸೇನೆಗೆ ಸೇರುವ ಆಫರ್ ನೀಡಿದರು. ಆದರೆ ಧ್ಯಾನ್ ಚಂದ್ ಅವರು, “ನಾನು ಭಾರತೀಯನು ಮತ್ತು ನನ್ನ ಮನೆ ಭಾರತ” ಎಂದು ಹೇಳಿ, ಆ ಆಫರ್ ಅನ್ನು ಸವಿನಯದಿಂದ ನಿರಾಕರಿಸಿದರು.
ನಿಜವಾದ ದೇಶಭಕ್ತಿ:
ಧ್ಯಾನ್ ಚಂದ್ ಅವರ ಈ ನಿರ್ಧಾರವು ಭಾರತದ ಕ್ರೀಡಾ ಇತಿಹಾಸದಲ್ಲಿ ದೇಶಭಕ್ತಿಯ ಮಾದರಿಯಾಗಿ ಉಳಿದಿದೆ. ಆ ದಿನದ ವಿಜಯವು ಕೇವಲ ಹಾಕಿ ಪಂದ್ಯದಲ್ಲಷ್ಟೇ ಸೀಮಿತವಾಗಿರಲಿಲ್ಲ, ಅದು ಭಾರತದ ಸ್ವಾಭಿಮಾನದ ಪ್ರತೀಕವಾಗಿ ಪರಿಣಮಿಸಿತು.