Bengaluru

ಉತ್ತರ ಕನ್ನಡದಲ್ಲಿ ನೌಕಾನೆಲೆಯ ಮಾಹಿತಿ ಸೋರಿಕೆ: ಸ್ಥಳಿಯರಿಂದಲೇ ನಡೆಯಿತೇ ದೇಶದ್ರೋಹ..?!

ಉತ್ತರ ಕನ್ನಡ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಯೋತ್ಪಾದಕ ಸಂಘಟನೆಗಳು ತಮ್ಮ ಜಾಲವನ್ನು ಎಲ್ಲೆಡೆ ಬೀರಿರುವ ಶಂಕೆಯ ನಡುವೆ, ರಾಷ್ಟ್ರೀಯ ತನಿಖಾ ದಳ (NIA) ತಂಡವು ಆಗಸ್ಟ್ 28 ರಂದು ಮತ್ತೆ ಕಾರವಾರ ಮತ್ತು ಆಂಕೋಲಾ ಭಾಗಗಳಲ್ಲಿ ದಾಳಿ ನಡೆಸಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ವಿವಿಧ ರೀತಿಯಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಅಂಕೋಲಾ ತಾಲೂಕಿನ ಕನಕನಹಳ್ಳಿಯ ಅಕ್ಷಯ ರವಿ ನಾಯ್ಕ ಸೇರಿದಂತೆ ಮೂವರನ್ನು ವಿಚಾರಣೆಗೊಳಪಡಿಸಲಾಗಿದೆ. ಇವರಲ್ಲಿ ಕೆಲವರು ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ನೌಕಾನೆಲೆ ಸುತ್ತಮುತ್ತಲಿನ ನಿಷೇಧಿತ ಪ್ರದೇಶಗಳ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿದ್ದಾರೆ ಎಂಬ ಶಂಕೆ ಇವರ ಮೇಲೆ ವ್ಯಕ್ತವಾಗಿದೆ.

ಎನ್‌ಐಎ ತಂಡವು ನಸುಕಿನ ಜಾವವೇ ಅಕ್ಷಯ ರವಿ ನಾಯ್ಕನ ಮನೆಯ ಮೇಲೆ ದಾಳಿ ನಡೆಸಿದ್ದು, ಆತನ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡು, ಸುಮಾರು 6-7 ಗಂಟೆಗಳ ಕಾಲ ಸ್ಥಳದಲ್ಲೇ ವಿಚಾರಣೆ ನಡೆಸಿದೆ. ದಾಳಿಯ ವೇಳೆ ಆತನ ಕುಟುಂಬದ ಸದಸ್ಯರ ಮೊಬೈಲ್‌ಗಳನ್ನು ಸಹ ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿ, ಬಳಿಕ ಅವುಗಳನ್ನು ಹಿಂತಿರುಗಿಸಿದೆ.

ಇದೇ ರೀತಿ, ಕಾರವಾರದ ಇತರ ಇಬ್ಬರನ್ನು ಕೂಡಾ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಹಠಾತ್ ದಾಳಿ ನಡೆಸುವಾಗ ಸ್ಥಳೀಯ ಪೊಲೀಸರಿಗೆ, ಅಥವಾ ಇತರರಿಗೆ ಯಾವುದೇ ಮಾಹಿತಿ ನೀಡದೇ, ಎನ್‌ಐಎ ತಂಡ ಚುರುಕಿನ ಕಾರ್ಯಾಚರಣೆಯನ್ನು ನಡೆಸಿದ್ದು, ಜನರಲ್ಲಿ ಅನುಮಾನ ಮತ್ತು ಕುತೂಹಲವನ್ನು ಹೆಚ್ಚಿಸಿದೆ.

ಅಂಕೋಲಾ ಮತ್ತು ಕಾರವಾರ ಭಾಗದಲ್ಲಿ ನಡೆಯುತ್ತಿರುವ ಈ ದಾಳಿ, ಅಣು ಸ್ಥಾವರ, ನೌಕಾ ನೆಲೆ, ವಿಮಾನ ನಿಲ್ದಾಣ ಸೇರಿದಂತೆ ಬಹು ಮಹತ್ವದ ಯೋಜನೆಗಳು ನೆಲೆಸಿರುವ ಭಾಗದಲ್ಲಿ ಭಯೋತ್ಪಾದಕ ಸಂಘಟನೆಯ ಹಾವಳಿ ಹೆಚ್ಚಾಗುತ್ತಿದೆ ಎಂಬ ಆತಂಕ ಜನರಲ್ಲಿ ವ್ಯಕ್ತವಾಗಿದೆ.

ಸಾಮಾನ್ಯ ಜನರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಯಾವುದೇ ಶಂಕಾಸ್ಪದ ಚಟುವಟಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಸೂಚಿಸಬೇಕು. ರಾಷ್ಟ್ರೀಯ ಭದ್ರತೆಗೆ ಹಾನಿ ಮಾಡುವಂತಹ ಯಾವುದೇ ಕೃತ್ಯಗಳಿಗೆ ಕೈಜೋಡಿಸಬಾರದು ಎಂಬ ನಿಟ್ಟಿನಲ್ಲಿ ಜಾಗೃತಿ ವಹಿಸುವುದು ಅಗತ್ಯ.

ಇದಕ್ಕೂ ಮುನ್ನ ಭಟ್ಕಳ ಮತ್ತು ಶಿರಸಿ ಭಾಗಗಳಲ್ಲಿ ನೌಕಾನೆಲೆಯಲ್ಲಿ ನಡೆಯುವ ರಹಸ್ಯ ಚಟುವಟಿಕೆಗಳ ಬಗ್ಗೆ ಸುದ್ದಿ ಕೇಳಿಬಂದಿದ್ದರೆ, ಇದೀಗ ಅಂಕೋಲಾ ಹಾಗೂ ಕಾರವಾರ ಭಾಗದಲ್ಲಿ ನಡೆದಿರುವ ದಾಳಿಗಳು ಜನರನ್ನು ಮತ್ತಷ್ಟು ಕಳವಳಗೊಳಿಸಿರುವಂತಿದೆ.

Show More

Leave a Reply

Your email address will not be published. Required fields are marked *

Related Articles

Back to top button