ಶ್ರೀಕೃಷ್ಣನ ಸನ್ನಿಧಿಯಲ್ಲಿ ಒಂದಾದ ನೀಲ್, ಶೆಟ್ರು, ಹಾಗೂ ಜೂ. ಎನ್‌ಟಿಆರ್: ಏನು ವಿಶೇಷ..?!
ಉಡುಪಿ: ಕರಾವಳಿ ಜಿಲ್ಲೆಯ ಉಡುಪಿಯ ಶ್ರೀ ಕೃಷ್ಣನ ದೇವಾಲಯಕ್ಕೆ ಇಂದು ಭಾರತೀಯ ಚಿತ್ರರಂಗದ ದಿಗ್ಗಜರು ಬಂದಿದ್ದು ವಿಶೇಷವಾಗಿತ್ತು. ತೆಲುಗು ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಕುಟುಂಬ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕುಟುಂಬ, ಹಾಗೆಯೇ ಕೆಜಿಎಫ್ ಹಾಗೂ ಸಲಾರ್ ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್ ಒಂದೆಡೆ ಸೇರಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಂದಿರದಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ರಿಷಬ್ ಶೆಟ್ಟಿ ಒಟ್ಟಿಗೆ ತೀರ್ಥ ಪ್ರಸಾದ ಪಡೆದಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಜೂನಿಯರ್ ಎನ್‌ಟಿಆರ್ ಅವರ ತಾಯಿಯ ತವರು ಮನೆ ಕುಂದಾಪುರ ಎಂಬುದು ಎಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲದೆ ಅವರು ಶುದ್ಧ ಕನ್ನಡ ಕೂಡ ಅವರ ತಾಯಿಯಿಂದ ಕಲಿತಿದ್ದು, ಈ ಹಿಂದೆ ಬಂದಂತಹ ತಮ್ಮ ಆರ್‌ಆರ್‌ಆರ್ ಚಿತ್ರಕ್ಕೆ ಸ್ವತಃ ತಾವೇ ದ್ವನಿ ನೀಡಿದ್ದರು.
ಕೆಲವು ದಿನಗಳ ಹಿಂದೆ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಒಂದುಗೂಡಿ ಹೆಸರಿಡದ ಚಿತ್ರಕ್ಕೆ ಮುನ್ನುಡಿ ಬರೆದಿದ್ದಾರೆ. ಮುಹೂರ್ತ ಪೂಜೆ ಸಂಪನ್ನಗೊಂಡಿದ್ದು, ಶೂಟಿಂಗ್ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಹೀಗಾಗಿ ಚಿತ್ರೀಕರಣಕ್ಕೆ ಯಾವುದೇ ರೀತಿಯ ವಿಘ್ನ ಬಾರದೆ ಇರಲಿ ಎಂದು ಉಡುಪಿ ಶ್ರೀಕೃಷ್ಣ ಮಂದಿರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇತ್ತ ರಿಷಬ್ ಶೆಟ್ಟಿ, ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಒಟ್ಟಿಗೆ ಕೂತು ಉಪಹಾರ ಸೇವಿಸುತ್ತಿರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ರೋಮಾಂಚನ ಸೃಷ್ಟಿಸಿದೆ.