ಹನುಮಾನ್ ಸಿನಿಮಾ ನಿರ್ದೇಶಕರಿಂದ ಹೊಸ ಪ್ರಯೋಗ: ತೆರೆಗೆ ಬರುತ್ತಿದ್ದಾಳೆಯೇ “ಮಹಾಕಾಳಿ”..?!
ಬೆಂಗಳೂರು: ಹನುಮಾನ್ ಸಿನಿಮಾದಿಂದ ಭಾರೀ ಯಶಸ್ಸು ಪಡೆದಿರುವ ಪ್ರಶಾಂತ್ ವರ್ಮಾ, ಇದೀಗ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ‘ಮಹಾಕಾಳಿ’ ಚಿತ್ರವನ್ನು ಪ್ರಸ್ತುತಪಡಿಸಲು ಸಿದ್ಧರಾಗಿದ್ದಾರೆ. ಈ ಚಿತ್ರಕ್ಕೆ ವಿಶೇಷತೆ ಏನೆಂದರೆ, ನಿರ್ದೇಶನದ ಹೊಣೆ ಹೆಣ್ಣಿನ ಕೈಯಲ್ಲಿದೆ. ಈ ಚಿತ್ರಕ್ಕೆ ಕಥೆ ಬರೆದಿರುವ ಪ್ರಶಾಂತ್, ಮಾರ್ಟಿನ್ ಲೂಥರ್ ಕಿಂಗ್ ಸಿನಿಮಾದ ನಿರ್ದೇಶಕಿ ಪೂಜಾ ಅಪರ್ಣಾ ಕೊಲ್ಲೂರನ್ನು ‘ಮಹಾಕಾಳಿ’ಗೆ ನಿರ್ದೇಶಕರಾಗಿ ಆಯ್ಕೆ ಮಾಡಿದ್ದಾರೆ.
ಮಹಾಕಾಳಿ ಪಶ್ಚಿಮ ಬಂಗಾಳದ ಕಾಳಿ ದೇವಿಯ ಹಿನ್ನೆಲೆ ಹೊಂದಿದ್ದು, ಆ ನಾಡಿನ ಸಂಸ್ಕೃತಿಯ ಪ್ರಸ್ತಾವನೆಯೊಂದಿಗೆ ಹೊಸ ತರದ ಸೂಪರ್ ಹೀರೋ ಕಥೆಯನ್ನು ಕಲ್ಪನೆಯಲ್ಲಿ ಕಟ್ಟಿಕೊಡಲು ನಿರ್ಧರಿಸಲಾಗಿದೆ. ಹುಡುಗಿಯೊಬ್ಬಳು ಹುಲಿಗೆ ತನ್ನ ಹಣೆ ಕೊಟ್ಟು ನಿಂತಿರುವ ಪೋಸ್ಟರ್ ಈಗಾಗಲೇ ಭಾರೀ ಕುತೂಹಲ ಹುಟ್ಟಿಸಿದೆ.
ಈ ಚಿತ್ರವನ್ನು ಆರ್‌ಕೆಎಂಡಿ ಸ್ಟುಡಿಯೋಸ್ ಬ್ಯಾನರ್‌ನಡಿ ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಸ್ಮರಣ್ ಸಾಯಿ ಅವರ ಸಂಗೀತದೊಂದಿಗೆ ಮಹಾಕಾಳಿಯು ಭಾರತದಲ್ಲೇ ಮಾತ್ರವಲ್ಲದೆ ವಿದೇಶಿ ಭಾಷೆಗಳಲ್ಲಿಯೂ ಸದ್ದು ಮಾಡಲಿದೆಯಂತೆ.
ಹನುಮಾನ್ ಸಿನಿಮಾದಂತೆ ಮಹಾಕಾಳಿಯೂ ವಿವಿಧ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದ್ದು, ತಂಡ ಶೀಘ್ರದಲ್ಲೇ ತಾರಾಬಳಗದ ವಿವರಗಳನ್ನು ಹಂಚಿಕೊಳ್ಳಲಿದೆ.