ಬಿಷ್ಣೋಯ್ ಗ್ಯಾಂಗ್‌ನಿಂದ ಮುಂದಿನ ಟಾರ್ಗೆಟ್: ಸ್ಟಾಂಡ್ ಅಪ್ ಕಾಮಿಡಿಯನ್ ಮೇಲೆ ಅವರಿಗೇನು ಕೋಪ..?!

ಮುಂಬೈ: ಸ್ಟಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರುಖಿ ಗೆ ಕಾರಾಗೃಹದಲ್ಲಿರುವ ಗ್ಯಾಂಗ್ ಲೀಡರ್ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಅಪರಾಧ ಸಂಘಟನೆಯಿಂದ ಜೀವ ಬೆದರಿಕೆ ಬಂದಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬೆದರಿಕೆಯು ಮಾಜಿ ರಾಜ್ಯ ಸಚಿವ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣದ ನಂತರ ಬೆಳಕಿಗೆ ಬಂದಿದೆ. ಫಾರುಖಿ ಅವರಿಗೆ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ಪೊಲೀಸ್ ಇಲಾಖೆಯು ಈ ಪ್ರಕರಣದ ಬಗ್ಗೆ ಆಳವಾಗಿ ತನಿಖೆ ನಡೆಸುತ್ತಿದ್ದು, ಬೆದರಿಕೆಯ ಹಿನ್ನೆಲೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಕಳೆದ ವರ್ಷಗಳಲ್ಲಿ ಮುನಾವರ್ ಅವರಿಗೆ ಕೆಲ ಹಿಂದೂ ಸಂಘಟನೆಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ ಆರೋಪ ಕೇಳಿ ಬಂದಿತ್ತು, ಆದರೆ ಅವರು ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಈ ಬೆಳವಣಿಗೆಗಳು ಬಾಬಾ ಸಿದ್ಧಿಕಿ ಹತ್ಯೆಯ ನಂತರ ನಡೆಯುತ್ತಿವೆ. ಶನಿವಾರ ಸಂಜೆ ಮುಂಬೈನ ಬಾಂದ್ರಾ ನಲ್ಲಿ ಸಿದ್ಧಿಕಿ ಅವರನ್ನು ಮೂರು ಬಾರಿ ಗುಂಡಿಕ್ಕಿದ ಆರೋಪದಲ್ಲಿ ಬಿಷ್ಣೋಯ್ ಗ್ಯಾಂಗ್ ನ ಮೂವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ಮುಂಬೈಯಲ್ಲಿ ಈಗಾಗಲೇ ಸಲ್ಮಾನ್ ಖಾನ್ ಮನೆ ಬಳಿ ಗುಂಡು ಹಾರಿಸಿದ ಪ್ರಕರಣದಲ್ಲಿಯೂ ಶಂಕೆಗೀಡಾಗಿದೆ.
ಇನ್ನು NIA (National Investigation Agency) 2022 ರಲ್ಲಿ ಈ ಗ್ಯಾಂಗ್ ವಿರುದ್ಧ UAPA ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು. ಇದರ ತನಿಖೆಯಲ್ಲಿ ಈ ಗ್ಯಾಂಗ್ ದೇಶದ ಹಲವೆಡೆಗಳಲ್ಲಿ “ಮಾಫಿಯಾ ಶೈಲಿಯ” ಅಕ್ರಮ ಜಾಲಗಳನ್ನು ಹರಡುತ್ತಿದೆ ಎಂಬುದರ ಮೇಲೆ ಬೆಳಕು ಚೆಲ್ಲಲಾಗಿದೆ. ಈ ಗ್ಯಾಂಗ್, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ (2022 ಮೇ) ಸೇರಿದಂತೆ ಬೃಹತ್ ಮಟ್ಟದ ಸುಲಿಗೆ, ಭೂಗತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿದುಬಂದಿದೆ.