ಪೋಷಕರನ್ನು ಆರೈಕೆ ಮಾಡದ ಮಕ್ಕಳಿಗೆ ಆಸ್ತಿ ಇಲ್ಲ!

“ಮಕ್ಕಳು ತಮ್ಮ ಪೋಷಕರನ್ನು ವೃದ್ದಾಪ್ಯ ವಯಸ್ಸಿನಲ್ಲಿ ಆರೈಕೆ ಮಾಡದಿದ್ದರೆ ಮಕ್ಕಳಿಗೆ ಅಥವಾ ಸಂಬಂಧಿಕರ ಹೆಸರಿಗೆ ಬರೆದ ಆಸ್ತಿಯ ವಿಲ್ ಅಥವಾ ದಾನಪತ್ರವನ್ನು ಹಿಂಪಡೆದು ಮರಳಿ ತಮ್ಮ ಹೆಸರಿಗೆ ಆಸ್ತಿಯನ್ನು ನೊಂದಾಯಿಸಿಕೊಳ್ಳಬಹುದು ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು

ಈ ಕುರಿತು ಸದನದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯೆ ಬಿಲ್ಕಿಸ್ ಬಾನು “ಮಕ್ಕಳು ತಮ್ಮ ಪೋಷಕರನ್ನು ವೃದ್ದಾಪ್ಯ ವಯಸ್ಸಿನಲ್ಲಿ ಆರೈಕೆ ಮಾಡುತ್ತಿಲ್ಲ, ಪೋಷಕರ ರಕ್ಷಣೆಗೆ ಕಠಿಣ ಕಾನೂನು ತರಬೇಕು” ಎಂದು ಕೇಳಿದಾಗ ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು “ಹೊಸ ಕಾನೂನು ತರುವ ಅಗತ್ಯ ಇಲ್ಲ. ಈಗಾಗಲೆ ಕೇಂದ್ರ ಸರ್ಕಾರ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯನ್ನು 2007 ರಲ್ಲೆ ಜಾರಿಗೆ ತಂದಿದೆ ” ಎಂದು ತಿಳಿಸಿದರು.

“ಈ ಕಾಯ್ದೆ ಅನ್ವಯ ಮಕ್ಕಳು ವಯಸ್ಸಾದ ತಮ್ಮ ಅಪ್ಪ ಅಮ್ಮಂದಿರನ್ನು ಪೋಷಿಸಬೇಕು ಔಷಧಿ, ಖರ್ಚಿಗೆ ಮಾಸಿಕವಾಗಿ ಹಣ ನೀಡಬೇಕು. ಹಣ ನೀಡದೆ, ಅರೈಕೆ ಮಾಡದೆ ಇದ್ದರೆ, ಪೋಷಕರು ಸೆಕ್ಷನ್ 9 ರ ಅಡಿ ಉಪವಿಭಾಗಾಧಿಕರಿಗಳಿಗೆ ದೂರು ಸಲ್ಲಿಸಬಹುದು. ಈ ಕುರಿತಂತೆ ಎಲ್ಲಾ ಜವಾಬ್ದಾರಿ ಮತ್ತು ಅಧಿಕಾರವನ್ನು ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಒಂದು ವೇಳೆ ಪೋಷಕರು ಕೊಟ್ಟ ದೂರು ಸಾಬಿತಾದರೆ ತಂದೆ-ತಾಯಿ, ಮಕ್ಕಳ ಅಥವಾ ಸಂಬಂಧಿಕರ ಹೆಸರಿಗೆ ಬರೆದ ತಮ್ಮ ಆಸ್ತಿಯ ವಿಲ್ ಅಥವ ದಾನಪತ್ರವನ್ನು ರದ್ದು ಪಡಿಸಿಕೊಳ್ಳುವ ಅವಕಾಶ ಇದೆ. ಹಾಗೂ ಆಸ್ತಿಯನ್ನು ಮರಳಿ ತಮ್ಮ ಹೆಸರಿಗೆ ನೊಂದಾಯಿಸಿಕೊಳ್ಳುವ ಅವಕಾಶವೂ ಈ ಕಾನೂನಿನಲ್ಲಿದೆ” ಎಂದು ವಿವರಿಸಿದರು.
” ಈ ಬಗ್ಗೆ ಉಪವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಲಾಗುವುದು, ಈಗಾಗಲೆ ಅಧಿಕಾರಿಗಳ ಮುಂದೆ ಸಾಕಷ್ಟು ಪ್ರಕರಣಗಳು ಬಂದಿವೆ. ಅರ್ಜಿದಾರರು ಜಿಲ್ಲಾಧಿಕಾರಿಗಳಿಗೂ ಅಪಿಲೂ ಸಲ್ಲಿಸಬಹುದು” ಎಂದು ಕಂದಾಯ ಸಚಿವರು ತಿಳಿಸಿದರು.
ಲೋಕನಾಥ್ ಹೂಗಾರ್
ಅಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ