‘ಒಂದು ದೇಶ, ಒಂದು ಚುನಾವಣೆ’: ನರೇಂದ್ರ ಮೋದಿ ಸಚಿವ ಸಂಪುಟ ಫುಲ್ ಸಪೋರ್ಟ್!
ದೆಹಲಿ: ಭಾರತದಲ್ಲಿ ಚುನಾವಣೆ ಪದ್ದತಿಯಲ್ಲಿ ಮಹತ್ತರ ಬದಲಾವಣೆ ತರುವ “ಒಂದು ದೇಶ, ಒಂದು ಚುನಾವಣೆ” ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆಯು ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಒಂದೇ ವೇಳಾಪಟ್ಟಿಯಲ್ಲಿ ನಡೆಸಲು ಉದ್ದೇಶಿತವಾಗಿದೆ. ಈ ಕಾಯಿದೆ ಮುಂಬರುವ ಚಳಿಗಾಲದ ಕಲಾಪದಲ್ಲಿ ಸಂಸತ್ತಿನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ನಿರ್ಧಾರವು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ರಚಿಸಲಾದ ಸಮಿತಿಯ ವರದಿಯ ಒಪ್ಪಿಗೆಯ ನಂತರ ಬಂದಿದೆ. ದೇಶದ ಪ್ರಗತಿಗೆ ವ್ಯಾಪಕ ಚುನಾವಣೆಗಳು ಅಡ್ಡಿ ತರುತ್ತವೆ ಎಂದು ಪ್ರಧಾನಿ ಮೋದಿ ಕಳೆದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.
“ಒಂದು ದೇಶ, ಒಂದು ಚುನಾವಣೆ”ಯ ಕಲ್ಪನೆ 1980ರ ದಶಕದಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಲ್ಪಟ್ಟಿತ್ತು. ನ್ಯಾಯಮೂರ್ತಿ ಬಿ.ಪಿ. ಜೀವನ್ ರೆಡ್ಡಿ ನೇತೃತ್ವದ ಕಾನೂನು ಆಯೋಗವು 1999ರ ಮೇ ತಿಂಗಳಲ್ಲಿ “ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳ ಚುನಾವಣೆಗಳನ್ನು ಒಂದೇ ವೇಳೆಯಲ್ಲಿ ನಡೆಸಬೇಕು” ಎಂಬ ಅಭಿಪ್ರಾಯವನ್ನು 170ನೇ ವರದಿಯಲ್ಲಿ ನೀಡಿತ್ತು.