Alma Corner

ಸಂಸತ್‌ನಲ್ಲಿ ಕೋಲಾಹಲ ಎಬ್ಬಿಸಿದ ʼಒಂದು ದೇಶ, ಒಂದು ಚುನಾವಣೆʼ

ಪ್ರತಿಪಕ್ಷದ ತೀವ್ರ ವಿರೋಧದ ಮಧ್ಯೆಯೇ ಒಂದು ದೇಶ, ಒಂದು ಚುನಾವಣೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ತಿದ್ದುಪಡಿ ಮಸೂದೆಗಳನ್ನು ಮಂಗಳವಾರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಲೋಕಸಭೆಯಲ್ಲಿ ಮಂಡಿಸಿದರು. ಇದು ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳನ್ನು, ಏಕಕಾಲದಲ್ಲಿ ನಡೆಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯಾಗಿದೆ. ಕೇಂದ್ರಾಡಳಿತ ಪ್ರದೇಶಗಳ ತಿದ್ದುಪಡಿ ಮಸೂದೆ, ಕೇಂದ್ರಾಡಳಿತ ಪ್ರದೇಶಗಳಾದ ಪುದುಚೆರಿ, ದೆಹಲಿ ಮತ್ತು ಜಮ್ಮು-ಕಾಶ್ಮೀರ್‌ ಚುನಾವಣೆಗಳನ್ನು ಲೋಕಸಭೆ ಚುನಾವಣೆಗಳೊಂದಿಗೆ ಒಗ್ಗೂಡಿಸುತ್ತದೆ. ಈ ಮಸೂದೆಗಳು ಸಂವಿಧಾನದ ಮೂಲ ರಚನೆಯ ಮತ್ತು ಒಕ್ಕೂಟ ವ್ಯವಸ್ಥೆಯ ವಿರುದ್ಧವಾಗಿದೆ (anti-federal) ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಆರೋಪಿಸಿದರು. 

ಸಂಸತ್‌ನಲ್ಲಿ 90 ನಿಮಿಷಗಳ ಚರ್ಚೆಯ ನಂತರ, ʼಒಂದು ದೇಶ, ಒಂದು ಚುನಾವಣೆʼ ಮಸೂದೆ ಎಂದು ಉಲ್ಲೇಖಿಸಲ್ಪಡುವ ಸಂವಿಧಾನದ (129 ತಿದ್ದುಪಡಿ) ಮಸೂದೆ, 2024 ನ್ನು ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಮಂಡಿಸಿದರು. ಈ ಮಸೂದೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಅಸಂವಿಧಾನಿಕ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಮತ್ತು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ, ಹೀಗಾಗಿ ಮಸೂದೆ ಹಿಂಪಡೆಯಬೇಕೆಂದು INDIA ಒಕ್ಕೂಟದ ಸಂಸದರು ಒತ್ತಾಯಿಸಿದರು.

ಮಸೂದೆ ಮಂಡನೆಯ ಪರವಾಗಿ 263 ಸದಸ್ಯರು ಮತವನ್ನು ಚಲಾಯಿಸಿದರೆ, 198 ಸದಸ್ಯರು ಮಸೂದೆ ಮಂಡನೆಗೆ ವಿರೋಧಿಸಿದರು. ನಂತರ ಕಲಾಪವನ್ನು 3 ಗಂಟೆಗೆ ಮುಂದೂಡಲಾಯಿತು.

ಸದನದಲ್ಲಿನ ವಿರೋಧ ಪಕ್ಷಗಳ ವಿರೋಧಕ್ಕೆ ಪ್ರತಿಕ್ರಿಯಿಸಿದ ಸಚಿವ ಅರ್ಜುನ್‌ ರಾಮ್‌ ಮೇಘವಾಲ್, “ಈ ಮಸೂದೆಯು ರಾಜ್ಯಗಳ ಅಧಿಕಾರಗಳನ್ನು ಹಾಳು ಮಾಡುವುದಿಲ್ಲ, ಮತ್ತು ನ್ಯಾಯಾಂಗ ವಿಮರ್ಶೆ ಮತ್ತು ಒಕ್ಕೂಟ ವ್ಯವಸ್ಥೆಗೆ ಯಾವುದೇ ಧಕ್ಕೆ ತರುವುದಿಲ್ಲ” ಎಂದರು.

ಧನ್ಯಾ ರೆಡ್ಡಿ ಎಸ್‌

ಆಲ್ಮಾ ಮೀಡಿಯಾ ಸ್ಕೂಲ್‌ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button