Notice: Function _load_textdomain_just_in_time was called incorrectly. Translation loading for the yotuwp-easy-youtube-embed domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u700529020/domains/akeynews.com/public_html/wp-includes/functions.php on line 6121

Notice: Function _load_textdomain_just_in_time was called incorrectly. Translation loading for the pods domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u700529020/domains/akeynews.com/public_html/wp-includes/functions.php on line 6121
ಪ್ಯಾರಿಸ್ ಒಲಂಪಿಕ್ಸ್ - 2024. ಜುಲೈ 26 ರಿಂದ ಆಗಸ್ಟ್ 11 ರವರೆಗೆ. - Akey News
Alma Corner

ಪ್ಯಾರಿಸ್ ಒಲಂಪಿಕ್ಸ್ – 2024. ಜುಲೈ 26 ರಿಂದ ಆಗಸ್ಟ್ 11 ರವರೆಗೆ.

ಮುಂದಿನ ಮೂರು ವಾರಗಳು ಕುತೂಹಲದಿಂದ ಗಮನಿಸಬೇಕಾದ ವಿಷಯವೆಂದರೆ ಪ್ಯಾರಿಸ್ ಒಲಿಂಪಿಕ್ಸ್. ಕ್ರಿಸ್ತ ಪೂರ್ವ ಶತಮಾನದಲ್ಲಿ ಗ್ರೀಕ್ ನಲ್ಲಿ ಪ್ರಾರಂಭವಾದ ಒಲಂಪಿಕ್ ಈಗಲೂ ವಿಶ್ವದ ಅತ್ಯಂತ ಆಕರ್ಷಣೀಯ ಸ್ಪರ್ಧಾತ್ಮಕ ಕ್ರೀಡಾಕೂಟ. ಇದೊಂದು ಕ್ರೀಡಾಪಟುಗಳ ಮಹತ್ವದ ಹಬ್ಬ. ದಯವಿಟ್ಟು ಕ್ರೀಡೆಗಳಲ್ಲಿ ಆಸಕ್ತಿ ಇರುವವರು ಮಾತ್ರವಲ್ಲ ಸಾಮಾನ್ಯ ಜನರು, ಎಲ್ಲಾ ವಿದ್ಯಾರ್ಥಿಗಳು ಇದನ್ನು ಗಮನಿಸಿ…….

ಗೆದ್ದು ಬಾ ಭಾರತ ಗೆದ್ದು ಬಾ….
ಒಲಿಂಪಿಕ್ ಕ್ರೀಡಾ ಪದಕಗಳನ್ನು ಹೊತ್ತು ಬಾ ಇಂಡಿಯಾ… ಇಂಡಿಯಾ…. ಇಂಡಿಯಾ…….

ಎಲ್ಲೆಲ್ಲೂ ಮೊಳಗುತ್ತಿದೆ ದೇಶ ಪ್ರೇಮದ ಕೂಗು…

ಯುದ್ದಕಾಲೇ ಶಸ್ತ್ರಾಭ್ಯಾಸ….

ಸ್ವಲ್ಪ ತಾಳ್ಮೆಯಿಂದ ಯೋಚಿಸಿ ನೋಡಿ. ಭಾವನೆಗಳನ್ನು ಬದಿಗಿಡಿ….

ಎಲ್ಲಿದೆ ನಮ್ಮಲ್ಲಿ ಕ್ರೀಡಾ ಸಂಸ್ಕೃತಿ,
ಎಲ್ಲಿದೆ ನಮ್ಮಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ,
ಎಲ್ಲಿದೆ ನಮ್ಮಲ್ಲಿ ವಿಶ್ವದರ್ಜೆಯ ಆಹಾರದ ಗುಣಮಟ್ಟ,
ಎಲ್ಲಿದೆ ನಮ್ಮಲ್ಲಿ ಆಧುನಿಕ ತರಬೇತಿಯ ತಂತ್ರಜ್ಞಾನ,
ಎಲ್ಲಿದೆ ನಮ್ಮಲ್ಲಿ ಕ್ರೀಡೆಗೆ ಪೂರಕ ವಾತಾವರಣ………
( ಇತ್ತೀಚೆಗೆ ಕೆಲವು ಕ್ರೀಡೆಗಳು ಮತ್ತು ಕ್ರೀಡಾಂಗಣಗಳಲ್ಲಿ ಕೆಲವರಿಗೆ ಮಾತ್ರ ಒಂದಷ್ಟು ಸುಧಾರಣೆ ಆಗುತ್ತಿದೆ. ಆದರೆ ಅದು ದೇಶಾದ್ಯಂತ ಸಹಜವಾಗಿ ಸಾಮಾನ್ಯ ಜನರ ಮಟ್ಟದಲ್ಲಿ ಎಲ್ಲರಿಗೂ ತಲುಪುವಂತೆ ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಈ ಮಾತುಗಳು……)

ಜಾತಿ ವ್ಯವಸ್ಥೆ ದೇಶದ ಬಹುತೇಕ ಜನರ ರಕ್ತದಲ್ಲಿ ಸೇರಿ ಹೋಗಿದೆ, ಭ್ರಷ್ಟಾಚಾರ ನರನಾಡಿಗಳಲ್ಲಿ ಬೆರೆತು ಹೋಗಿದೆ……

ಕ್ರೀಡೆ ಎಂಬುದು ರಾಜಕೀಯವಲ್ಲ. ಅಲ್ಲಿ ಸಂಖ್ಯೆಗೆ, ಭಾವನೆಗಳಿಗೆ ಮಾತುಗಳಿಗೆ ಬೆಲೆ ಇಲ್ಲ. ಅದು ದೇಹ ಮತ್ತು ಮನಸ್ಸುಗಳ ಅತ್ಯುತ್ತಮ ಸಮನ್ವಯದ ಕ್ರಿಯೆ…..ಳ

ಕೇವಲ ಆ ಕ್ಷಣದ ಪ್ರೋತ್ಸಾಹದಿಂದ ಯಾವುದೇ ಕ್ರೀಡೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಅದೊಂದು ನಿರಂತರ ತಪಸ್ಸು. ಅದೊಂದು ಸಂಸ್ಕೃತಿ. ಅದೊಂದು ಜೀವನ‌ ವಿಧಾನ. ಇಡೀ ಸಮಾಜ ಅದಕ್ಕೆ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ.

ಗೆದ್ದು ಬಾ ಎಂಬುದು ಕೇವಲ ನಮ್ಮ ‌ಆಶಯ ಮತ್ತು ಆಸೆ ಮಾತ್ರ……

ಗೆದ್ದು ಬಾ ಎಂದು ಇಂದು ಘೋಷಣೆ ಕೂಗುವವರು ಗೆಲ್ಲದಿರಲು ಈ ದೇಶದ ಸಾಮಾಜಿಕ ಅಸಮಾನತೆ ಮತ್ತು ಭ್ರಷ್ಟಾಚಾರ ಕಾರಣ. ಅದಕ್ಕೆ ನಾವು ಕೂಡ ಹೊಣೆ ಎಂಬುದನ್ನು ಮರೆತಿರುತ್ತಾರೆ.

2020 ವರೆಗೆ ಅಂದರೆ ಟೋಕಿಯೋ ಒಲಿಂಪಿಕ್ಸ್ ವರೆಗೆ, ಇಡೀ ಒಲಿಂಪಿಕ್ ಇತಿಹಾಸದಲ್ಲಿ ಅಮೆರಿಕ ಒಟ್ಟು 2667 ಪದಕಗಳನ್ನು ಗಳಿಸಿದೆ. ನಂತರದಲ್ಲಿ ‌ರಷ್ಯಾ, ಬ್ರಿಟನ್ ಸ್ಥಾನ ಗಳಿಸಿವೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಭಾರತ ಇಲ್ಲಿಯವರೆಗೆ ಕೇವಲ 35 ಪದಕಗಳನ್ನು ಮಾತ್ರ ಗಳಿಸಿದೆ. ಇದು ನಮ್ಮ ಸಾಧನೆ. ಬಹುಶಃ 2024 ರ ಪ್ಯಾರಿಸ್ ಒಲಿಂಪಿಕ್ ನಲ್ಲಿ ಚಿನ್ನದ ಬೇಟೆಯಲ್ಲಿ ಚೀನಾ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಹಿಂದಿಕ್ಕುವ ಸಾಧ್ಯತೆ ಇದೆ…..

ಇದಕ್ಕೆಲ್ಲ ಕಾರಣ ಆ ದೇಶದ ಜನರ ಒಟ್ಟು ದೈಹಿಕ ಮತ್ತು ಮಾನಸಿಕ ವ್ಯಕ್ತಿತ್ವ ಹಾಗು ಅಲ್ಲಿನ ಆಡಳಿತ ವ್ಯವಸ್ಥೆ….

ಭಾರತದಲ್ಲಿ ಕೇವಲ ಕ್ರೀಡೆ ಮಾತ್ರವಲ್ಲ ಯಾವುದೇ ಕ್ಷೇತ್ರದಲ್ಲಿ ವಿಶಾಲ ಮನೋಭಾವದ ಕೊರತೆ ಎದ್ದು ಕಾಣುತ್ತದೆ. ಸಣ್ಣತನ ಅಸೂಯೆ ಬಹುತೇಕ ಜನರನ್ನು ಆಕ್ರಮಿಸಿದೆ. ಫಲಿತಾಂಶಗಳ ಆಧಾರದ ಮೇಲೆ, ಹಣ, ಅಧಿಕಾರ, ಪ್ರಚಾರದ ಆಧಾರದ ಮೇಲೆ ಯಶಸ್ಸನ್ನು ಅಳೆಯುವ ಮನಸ್ಥಿತಿಯೇ ಹೆಚ್ಚಾಗಿದೆ. ನಿಜವಾದ ಒಳ್ಳೆಯ ಗುಣಮಟ್ಟದ ವ್ಯಕ್ತಿತ್ವವನ್ನು ಗುರುತಿಸುವ, ಪ್ರೋತ್ಸಾಹಿಸುವ ಬೆಳೆಸುವ ವ್ಯವಸ್ಥೆ ಇಲ್ಲದಂತಾಗಿದೆ….

ಗೆದ್ದು ಬಾ ಎಂದು 143 ಕೋಟಿ ಜನ ಅಲ್ಲ 700 ಕೋಟಿ ಜನ ಒಟ್ಟಿಗೇ ಕೂಗಿದರು, ಹಾರೈಸಿದರು ಗೆಲ್ಲಲು ಸಾಧ್ಯವಿಲ್ಲ. ಅದಕ್ಕೆ ಅನೇಕ ವರ್ಷಗಳ ನಿರಂತರ ಕ್ರೀಡಾ ಸಂಸ್ಕೃತಿಯ ಮತ್ತು ಒಟ್ಟು ವ್ಯವಸ್ಥೆಯ ಪರಿಶ್ರಮ ಮತ್ತು ಪ್ರಾಮಾಣಿಕತೆ, ದಕ್ಷತೆಯ ಅವಶ್ಯಕತೆ ಇದೆ…..

ಚುನಾವಣಾ ರಾಜಕೀಯದಲ್ಲಿಯೇ ತಮ್ಮ 5/10/ ವರ್ಷಗಳ ಆಡಳಿತ ಅವಧಿಯನ್ನು ಮುಗಿಸಲು ತಮ್ಮೆಲ್ಲಾ ಸಾಮರ್ಥ್ಯ ಉಪಯೋಗಿಸುವ ಈ ಜನರಿಂದ ಪದಕ ಗೆಲ್ಲುವ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟ ಕಾಪಾಡಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಹಣ ಹಂಚಿ, ಜಾತಿ ಧರ್ಮದ ಹೆಸರೇಳಿ ಗೆಲ್ಲುವವರಿಂದ, ಗೆದ್ದ ನಂತರ ಮತ್ತೆ ಹಣ ಮಾಡುವ, ವಿರೋಧಿಗಳನ್ನು ತುಳಿಯುವ ನಿರಂತರ ಕೆಲಸಗಳನ್ನೇ ಮಾಡುವ ಜನರಿಂದ ಪದಕಗಳನ್ನು ನಿರೀಕ್ಷಿಸುವುದು ಮೂರ್ಖತನ….

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ನಿಜವಾದ ಸಾಮರ್ಥ್ಯ ಉಪಯೋಗವಾದರೆ ಖಂಡಿತ ಇನ್ನು 10 ವರ್ಷಗಳಲ್ಲಿ ಒಲಿಂಪಿಕ್ ಪದಕ ಪಟ್ಟಿಯಲ್ಲಿ 5 ರ ಒಳಗಿನ ಸ್ಥಾನ ಪಡೆಯುವುದು ಕಷ್ಟವೇನಲ್ಲ. ಆದರೆ ಅದಕ್ಕಾಗಿ ಇಡೀ ವ್ಯವಸ್ಥೆಯ ಶುದ್ದೀಕರಣ ಕ್ರಿಯೆ ಆಗಬೇಕಿದೆ…..

ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಒಂದು ಸಣ್ಣ ಕ್ರೀಡಾ ಸಂಕೀರ್ಣ, ತಾಲ್ಲೂಕು ಮಟ್ಟದಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಕ್ರೀಡಾಂಗಣ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ನಿರ್ಮಿಸಿ ಅತ್ಯುತ್ತಮ ತರಬೇತಿ ನೀಡುವ ಅಂದರೆ ಆಹಾರದಿಂದ ವಿಶ್ರಾಂತಿಯವರೆಗೆ, ಪ್ರಾರಂಭದಿಂದ ಪದಕದವರೆಗೆ, ವ್ಯಕ್ತಿಯಿಂದ ವ್ಯವಸ್ಥೆಯವರೆಗೆ ಎಲ್ಲವನ್ನೂ ಸರಿಪಡಿಸಬೇಕು. ಕ್ರೀಡಾಪಟುವಿನ ಕೌಟುಂಬಿಕ, ಮಾನಸಿಕ ಆರೋಗ್ಯವನ್ನು ಸಹ ಅತ್ಯುತ್ತಮ ಮಟ್ಟದಲ್ಲಿ ಇರುವಂತೆ ವೈಯಕ್ತಿಕ ಆಸಕ್ತಿ ವಹಿಸಬೇಕು…

ಎಳವೆಯಿಂದಲೇ ಮಕ್ಕಳ ಆಸಕ್ತಿ ಮತ್ತು ಪ್ರತಿಭೆ ಗುರುತಿಸಿ ಕ್ರೀಡೆಯನ್ನೇ ಬದುಕಾಗಿಸುವ, ಅದರಿಂದ ಭವಿಷ್ಯದಲ್ಲಿ ಯಾವುದೇ ತೊಂದರೆ ಆಗದಿರುವ ಅನುಕೂಲ ವಾತಾವರಣ ನಿರ್ಮಿಸಬೇಕು. ಕೇವಲ ಉದ್ಯೋಗಕ್ಕಾಗಿ ಕ್ರೀಡೆಯಲ್ಲಿ ಆಸಕ್ತಿ ಹೊಂದುವ ಮನೋಭಾವ ಬೆಳೆಸಬಾರದು.

ಇಷ್ಟೆಲ್ಲಾ ಸಾಧ್ಯವಾದರೆ ಮಾತ್ರ ಏನಾದರೂ ಒಂದಷ್ಟು ಬದಲಾವಣೆ ಸಾಧ್ಯವಾಗಬಹುದು. ಇಲ್ಲದಿದ್ದರೆ ಗೆದ್ದು ಬಾ ಎನ್ನುವ ಕೂಗು ಒಂದು ಹಾಸ್ಯಾಸ್ಪದ ಭಾವನೆಯಾಗಬಹುದು….

ಏಕೆಂದರೆ ಕ್ರೀಡೆಗಳಲ್ಲಿ ಯಾವುದೇ ಅಡ್ಡ ದಾರಿ ಇರುವುದಿಲ್ಲ. ಕೆಟ್ಟ ರಾಜಕೀಯ ಪ್ರಭಾವ ಇರುವುದಿಲ್ಲ. ದೇಹ ಮನಸ್ಸುಗಳ ಸಮನ್ವಯ ಮಾತ್ರ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಲು ಸಾಧ್ಯ.

ನಮಗೂ ಭಾರತದ ಮಾನವ ಸಂಪನ್ಮೂಲ ಅತ್ಯುತ್ತಮ ರೀತಿಯಲ್ಲಿ ಉಪಯೋಗವಾಗಲಿ ಎಂಬ ಮಹದಾಸೆ ಇದೆ. ಆದರೆ ಅದು ಕೇವಲ ಭಾವನಾತ್ಮಕವಾಗದೆ ವಾಸ್ತವವಾಗಲಿ ಎಂಬ ಕಳಕಳಿಯಿಂದ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….

Show More

Related Articles

Leave a Reply

Your email address will not be published. Required fields are marked *

Back to top button