ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ: ‘ನಕ್ಸಲ್ ಮನೋಭಾವ’ ಎಂದಿದ್ದು ಯಾರಿಗೆ..?!
ಶ್ರೀನಗರ: ಜಮ್ಮು-ಕಾಶ್ಮೀರದ ಕತ್ರಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ‘ದೇವತೆ’ ಹೇಳಿಕೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅಮೇರಿಕಾದ ಪ್ರವಾಸದಲ್ಲಿ ನೀಡಿದ ‘ದೇವತೆ’ಗಳ ಕುರಿತಾದ ಹೇಳಿಕೆಯನ್ನು ಪ್ರಸ್ತಾಪಿಸಿ, ಮೋದಿಯವರು “ಇದು ನಮ್ಮ ನಂಬಿಕೆ, ಸಂಸ್ಕೃತಿಗೆ ಕಾಂಗ್ರೆಸ್ ನ ದ್ರೋಹ. ಮತಗಳಿಗಾಗಿ ಕಾಂಗ್ರೆಸ್ ಎಲ್ಲವನ್ನೂ ಪಣಕ್ಕಿಡುತ್ತದೆ,” ಎಂದು ಆರೋಪಿಸಿದರು.
ನಕ್ಸಲ್ ಮನೋಭಾವ:
ಮೋದಿಯವರು, “ಇದು ತಪ್ಪಾಗಿ ಅಥವಾ ಆಕಸ್ಮಿಕವಾಗಿ ನೀಡಿದ ಹೇಳಿಕೆ ಅಲ್ಲ. ಇದು ನಕ್ಸಲ್ ಮನೋಭಾವದ ಭಾಗವಾಗಿದೆ, ಇದನ್ನು ಇತರ ಧರ್ಮಗಳಿಂದ ಮತ್ತು ದೇಶಗಳಿಂದ ಆಮದು ಮಾಡಲಾಗಿದೆ. ಈ ನಕ್ಸಲ್ ಮನೋಭಾವವೇ ಜಮ್ಮುವಿನ ಡೋಗ್ರಾ ಸಂಸ್ಕೃತಿಗೆ ಅವಮಾನ ಆಗಿದೆ” ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಯುಎಸ್ ಪ್ರವಾಸದ ಹೇಳಿಕೆ:
ರಾಹುಲ್ ಗಾಂಧಿ ಅವರು ತಮ್ಮ ಅಮೇರಿಕಾದ ಪ್ರವಾಸದ ವೇಳೆ, ‘ದೇವತೆ’ ಎಂಬ ಪದವನ್ನು “ಆಂತರಿಕ ಭಾವನೆಗಳು ಮತ್ತು ಬಾಹ್ಯ ಅಭಿವ್ಯಕ್ತಿಗಳು ಒಂದೇ ಆಗಿರುವ ವ್ಯಕ್ತಿ” ಎಂದು ವಿವರಿಸಿದ್ದರು. “ಭಾರತದಲ್ಲಿ ದೇವತೆ ಎಂದರೆ ಪೂರ್ತಿ ಪಾರದರ್ಶಕ ವ್ಯಕ್ತಿ, ಇದು ದೇವರನ್ನು ಸೂಚಿಸುವ ಪದವಲ್ಲ” ಎಂದು ಅವರು ಸ್ಪಷ್ಟೀಕರಣ ನೀಡಿದ್ದರು.
ಮೋದಿಯವರ ಈ ಪ್ರತಿಕ್ರಿಯೆ ಮತ್ತು ರಾಹುಲ್ ಗಾಂಧಿಯವರ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಉಂಟುಮಾಡಿದೆ.