ಕಾಂಗ್ರೆಸ್ ಮುಖವಾಡ ಕಳಚಿದ ‘ಮುಡಾ’?!

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಹುಟ್ಟಿಸಿದ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಚಿಕೆ ಹಗರಣದಲ್ಲಿ ಖುದ್ದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಅವರ ಪತ್ನಿಯ ಹೆಸರು ಹರಿದಾಡುತ್ತಿದೆ. ಮುಡಾ ಹಗರಣದಲ್ಲಿ ಸಿಲುಕಿಕೊಂಡ ರಾಜ್ಯ ಸರ್ಕಾರದ ವಿರುದ್ಧ ಇಂದು ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿಯ ಹಲವು ಶಾಸಕರನ್ನು ಇಂದು ಬಿಡದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಮನಗರ ಮಾರ್ಗವಾಗಿ ಮೈಸೂರು ಗೆ ಹೊರಟಿದ್ದ ವಿಜಯೇಂದ್ರ ಹಾಗೂ ಶಾಸಕರಾದ ಮುನಿರತ್ನ ಸೇರಿದಂತೆ ಇನ್ನಿತರ ಭಾರತೀಯ ಜನತಾ ಪಕ್ಷದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಇದಾದ ನಂತರ ಅವರನ್ನು ಬಿಟ್ಟು ಕಳಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಅಧ್ಯಕ್ಷರು ಹಾಗೂ ಶಾಸಕರ ಬಂಧನವನ್ನು ತಿಳಿದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಪೊಲೀಸರ ವಿರುದ್ಧ ಘೋಷಣೆಯನ್ನು ಕೂಗಿದರು.
ನಿನ್ನೆ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಘಟಕದ ಮೇಲೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರದ ಮೇಲೆ ಸಾಲು ಸಾಲು ಹಗರಣಗಳ ಆರೋಪಗಳು ಇರುವಾಗ, ವಿರೋಧ ಪಕ್ಷವಾದ ಬಿಜೆಪಿ ರಾಜ್ಯದಲ್ಲಿ ಯಾವುದೇ ರೀತಿಯ ಪರಿಣಾಮಕಾರಿ ಪ್ರತಿಭಟನೆಗಳನ್ನು, ವಿರೋಧಗಳನ್ನು ತೋರಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಕೂಡ ಇದೆ. ಹೈಕಮಾಂಡ್ ಸೂಚನೆಯಂತೆ ಇಂದು ಬೃಹತ್ ಪ್ರತಿಭಟನೆ ನಡೆಸಲು ಹೊರಟಿದ್ದ ರಾಜ್ಯ ಬಿಜೆಪಿ ಘಟಕಕ್ಕೆ ಪೊಲೀಸರು ಅಡ್ಡ ಬಂದಿದ್ದಾರೆ.