ದೆಹಲಿ: ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಸಂಬಂಧ ದೆಹಲಿಯ ಕರ್ನಾಟಕ ಭವನದಲ್ಲಿ ಬೀಡುಬಿಟ್ಟಿರುವ ಶಾಸಕರ ಹಾಗೂ ಸಂಸದರ ಪಡೆಗೆ ಸಿಎಂ ಸಿದ್ದರಾಮಯ್ಯನವರು ಇಂದು ಸೇರಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು “ಈ ಚಳುವಳಿ ರಾಜಕೀಯ ಚಳುವಳಿ ಅಲ್ಲ, ರಾಜಕೀಯೇತರ ಚಳುವಳಿ. ಇದು ಕನ್ನಡಿಗರ ಹಿತವನ್ನು ಕಾಪಾಡಲು ಮಾಡುತ್ತಿರುವ ಚಳುವಳಿ. ಕೇಂದ್ರದಿಂದ ಕಳೆದ ಹಲವು ವರ್ಷಗಳಿಂದ ಕರ್ನಾಟಕಕ್ಕೆ ಬರಬೇಕಿದ್ದ ಸರಿಸುಮಾರು 1,87,000 ಕೋಟಿ ರೂಪಾಯಿಗಳನ್ನು ನಾವು ಕಳೆದುಕೊಂಡಿದ್ದೇವೆ. 14ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ 4.71% ತೆರಿಗೆ ಪಾಲು ಬಂದಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಈ ಸಂಖ್ಯೆ 3.64%ಗೆ ಇಳಿದಿದೆ. ಇದರಿಂದ ಸುಮಾರು 40-45% ತೆರಿಗೆ ಪಾಲಿನ್ನು ನಾವು ಕಳೆದುಕೊಂಡಿದ್ದೇವೆ”. ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
“2018-19 ರಲ್ಲಿ ಭಾರತ ಸರ್ಕಾರದ ಬಜೆಟ್ 24,42,000 ಕೋಟಿ ರೂಪಾಯಿ ಇರುವಾಗಲೇ ನಮಗೆ 51,000 ಕೋಟಿ ರೂಪಾಯಿ ಬಂದಿತ್ತು, ಆದರೆ 2023-24 ರಲ್ಲಿ 45,00,000 ಕೋಟಿ ಇರಬೇಕಾದರೆ ಕರ್ನಾಟಕಕ್ಕೆ ನೀಡಿದ ತೆರಿಗೆ ಪಾಲು ಕೇವಲ 50,257 ಕೋಟಿ ರೂಪಾಯಿ ಆಗಿದೆ. ಇದು ನಿಮಗೆ ಅನ್ಯಾಯ ಎಂದು ಕಾಣಿಸುತ್ತಿಲ್ಲವೇ?”. ಎಂದು ಕೇಳಿದರು.
ಇತ್ತಕಡೆ ರಾಜ್ಯ ಬಿಜೆಪಿ ಪಕ್ಷ ” ರಾಜ್ಯ ಸರ್ಕಾರ ಕನ್ನಡಿಗರ ತೆರಿಗೆ ಹಣದಲ್ಲಿ ಬಿಟ್ಟಿ ಜಾಹೀರಾತು ಕೊಟ್ಟು ಪ್ರಚಾರ ಪಡೆದುಕೊಂಡು ದೆಹಲಿಯಲ್ಲಿ ಶೋಕಿ ಮಾಡಲು ಹೋಗಿದೆ”. ಎಂದು ತಮ್ಮ ಎಕ್ಸ್ ಖಾತೆಯಲ್ಲಿ ತಿರುಗೇಟು ನೀಡಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ನಡೆಯುತ್ತಿರುವ ಈ ಹೈಡ್ರಾಮಾ ಎಲ್ಲಿಯವರೆಗೆ ಮುಂದುವರೆಯುತ್ತದೆ ಎಂದು ಕಾದು ನೋಡಬೇಕಿದೆ.