CinemaEntertainment

ಅಸ್ತಂಗತವಾದ ಅಪರ್ಣಾ. ಇನ್ನಿಲ್ಲ ಅಚ್ಚ ಕನ್ನಡದ ಶುದ್ಧ ಕಂಠ.

ಬೆಂಗಳೂರು: ತಮ್ಮ ಪರಿಶುದ್ಧವಾದ ಕನ್ನಡದ ನಿರೂಪಣೆಯಿಂದ ಜನರ ಮನಸ್ಸನ್ನು ಗೆದ್ದಿದ್ದ, ಖ್ಯಾತ ನಿರೂಪಕಿ ಹಾಗೂ ಕಲಾವಿದೆಯಾದ ಶ್ರೀಮತಿ. ಅಪರ್ಣಾ ಅವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಇವರು ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ ಇಂದ ಬಳಲುತ್ತಿದ್ದರು. ಅಪೂರ್ಣ ಅವರಿಗೆ 57 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿಯನ್ನು ಪತಿ ನಾಗರಾಜ್ ವಾಸ್ತರೇಯ ಅವರು ನಿನ್ನೆ ರಾತ್ರಿ ತಿಳಿಸಿದರು.

ಅಪರ್ಣಾ ಅವರು ಕನ್ನಡ ಚಲನಚಿತ್ರ ರಂಗಕ್ಕೆ 1984ರಲ್ಲಿ ತೆರೆಕಂಡ ‘ಮಸಣದ ಹೂವು’ ಚಿತ್ರದ ಮೂಲಕ ಮೊದಲು ಪಾದಾರ್ಪಣೆ ಮಾಡಿದರು. ಈ ಚಿತ್ರ ಕನ್ನಡದ ಧೀಮಂತ ನಿರ್ದೇಶಕ, ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಚಿತ್ರ ಕೂಡ ಆಗಿತ್ತು. ಅಪರ್ಣಾ ಅವರು ಧಾರಾವಾಹಿ ಕ್ಷೇತ್ರದಲ್ಲಿ ಕೂಡ ಅನೇಕ ಖ್ಯಾತ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮೂಡಲ ಮನೆ, ಮುಕ್ತ, ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಹಾಗೂ ಇತ್ಯಾದಿ.

“ನಾಗಸಂದ್ರಕ್ಕೆ ತೆರಳುವ ರೈಲು ಪ್ಲಾಟ್ಫಾರ್ಮ್ ನಂಬರ್ ಒಂದರಲ್ಲಿ ನಿಂತಿದೆ” ಎಂಬ ಧ್ವನಿಯನ್ನು ಬೆಂಗಳೂರಿನವರು ಮೆಟ್ರೋದಲ್ಲಿ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಕೇಳಿರುತ್ತಾರೆ. ಈ ಧ್ವನಿ ದಿವಂಗತ ಅಪರ್ಣಾ ಅವರದ್ದಾಗಿದೆ. ಅಪರ್ಣಾ ಅವರು 2011ರಲ್ಲಿ ಬೆಂಗಳೂರು ಮೆಟ್ರೋಗೆ ತಮ್ಮ ಧ್ವನಿಯನ್ನು ನೀಡಿದ್ದರು. ಇವರು 2015ರಿಂದ 2021 ರವರೆಗೆ ಸೃಜನ್ ಲೋಕೇಶ್ ನಡೆಸಿಕೊಡುವ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿಯಾಗಿ ಹಾಸ್ಯಕ್ಕೂ ಸೈ ಎನಿಸಿಕೊಂಡಿದ್ದರು.

ಇವರ ಅಗಲಿಕೆ ಕನ್ನಡ ಚಿತ್ರರಂಗ, ಕಿರುತೆರೆ ಹಾಗೂ ನಿರೂಪಣಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

Show More

Leave a Reply

Your email address will not be published. Required fields are marked *

Related Articles

Back to top button