ಬೆಂಗಳೂರು: ಅತ್ಯಾಚಾರಕ್ಕೆ ಒಳಗಾದ 17 ವರ್ಷದ ಬಾಲಕಿ ಸಹಾಯ ಕೋರಿ ಬಂದಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (81) ಅವರು ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಾರ್ಚ್ 14, ಗುರುವಾರದಂದು, ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಸದಾಶಿವನಗರದ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಕ್ಸೋ) ಪ್ರಕರಣ ದಾಖಲಾಗಿದೆ. ಬಾಲಕಿಯ ತಾಯಿ ಗುರುವಾರ ರಾತ್ರಿ ಠಾಣೆಗೆ ದೂರು ನೀಡಿದ್ದಾರೆ.’ ಎಂದು ಪೋಲಿಸರು ಹೇಳಿದ್ದಾರೆ.
‘ಮಗಳ ಮೇಲೆ ಅತ್ಯಾಚಾರ ಆಗಿತ್ತು. ಮಗಳಿಗೆ ನ್ಯಾಯ ಕೊಡಿಸುವಂತೆ ಹಾಗೂ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರಿ ಯಡಿಯೂರಪ್ಪ ಬಳಿ ಹೋಗಿದ್ದೆ. ಅದೇ ಸಂದರ್ಭದಲ್ಲಿ ನನ್ನ 17 ವರ್ಷದ ಮಗಳ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವಿಷಯ ಯಾರಿಗೂ ತಿಳಿಸದಂತೆ ನನ್ನನ್ನು ತಡೆದಿದ್ದರು. ಬಾಲಕಿ ಭಯಗೊಂಡಿದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.’ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಷಯದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್, ‘ಕಳೆದ ರಾತ್ರಿ 10 ಗಂಟೆಯ ಸುಮಾರಿಗೆ ಮಹಿಳೆಯೊಬ್ಬರು ಬಿ.ಎಸ್. ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದಾರೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ತನಿಖೆ ನಡೆಯುತ್ತಿದೆ. ನಮಗೆ ಸತ್ಯ ತಿಳಿಯುವರೆಗೆ, ನಾವು ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಇದು ಮಾಜಿ ಸಿಎಂ ಒಳಗೊಂಡಿರುವ ಸೂಕ್ಷ್ಮ ವಿಷಯವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಕೋನವಿದೆ ಎಂದು ನಾನು ಭಾವಿಸುವುದಿಲ್ಲ. ಸಂಕಷ್ಟದಲ್ಲಿರುವ ಮಹಿಳೆಗೆ ರಕ್ಷಣೆ ಬೇಕಾದರೆ ನೀಡಲಾಗುವುದು.’ ಎಂದಿದ್ದಾರೆ.
ತಮ್ಮ ವಿರುದ್ಧದ ಎಫ್ಐಆರ್ ಕುರಿತು ಪ್ರತಿಕ್ರಿಯಿಸಿದ, ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿಎಸ್ ಯಡಿಯೂರಪ್ಪ ರವರು ‘ ನನ್ನ ವಿರುದ್ಧ ಹೆಣ್ಣುಮಗಳೊಬ್ಬಳು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಕಾನೂನು ಪ್ರಕಾರ ಅದನ್ನು ಎದುರಿಸುತ್ತೇನೆ. ಇದರಲ್ಲಿ ರಾಜಕೀಯ ಪಿತೂರಿ ಇದೆ ಎಂದು ಭಾವಿಸುವುದಿಲ್ಲ. ಉಪಕಾರ ಮಾಡಲು ಹೋಗಿ ಏನೋ ಆಯಿತು ಇದನ್ನು ನಿರೀಕ್ಷೆ ಮಾಡಿರಲಿಲ್ಲ.’ ಎಂದು ಹೇಳಿದರು.