ಪೋಕ್ಸೋ ಪ್ರಕರಣ: ಬಿಎಸ್‌ವೈ ಬಂಧನಕ್ಕೆ ಅರ್ಜಿ.
ಬೆಂಗಳೂರು: ಮಗಳ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ಅದಕ್ಕೆ ನ್ಯಾಯ ಕೊಡಿಸಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಹೋಗಿದ್ದ ತಾಯಿ ಹಾಗೂ ಮಗಳು. ಆ ಸಂದರ್ಭದಲ್ಲಿ ರೂಮಿಗೆ ಕರೆದುಕೊಂಡು ಹೋಗಿ ಬಿಎಸ್‌ವೈ ಆ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಪೋಲಿಸ್ ಕಮಿಷನರ್‌ಗೆ ತಾಯಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
‘ರೇಪ್ ಆಗಿದೆಯೋ ಹೇಗೆ ಎಂಬುದನ್ನು ಚೆಕ್ ಮಾಡುವ ನೆಪದಲ್ಲಿ ಹದಿನೇಳು ವರ್ಷದ ಬಾಲಕಿಯನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಆಕೆಯ ವಕ್ಷಸ್ಥಳ ಹಿಸುಕಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸಲು ನಿರ್ದೇಶಿಸಬೇಕು’. ಎಂದು ರಾಜ್ಯದ ಪ್ರಾಸಿಕ್ಯೂಷನ್ ನಗರದ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಸಾಕ್ಷಿ ನಾಶ ಮಾಡುವ ಪ್ರಯತ್ನ ಕೂಡ ಯಡಿಯೂರಪ್ಪ ಅವರ ಕಡೆಯಿಂದ ನಡೆದಿದೆ ಎನ್ನಲಾಗಿದೆ. ಸಂತ್ರಸ್ತ ಬಾಲಕಿಯ ತಾಯಿಗೆ ₹2 ಲಕ್ಷ ರೂಪಾಯಿಗಳನ್ನು ಬಲವಂತವಾಗಿ ನೀಡಿ ಸಾಕ್ಷಿ ನಾಶಮಾಡಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಅರ್ಜಿಯನ್ನು ನಗರದ 51ನೇ ಸಿವಿಲ್ ಮತ್ತು ಹೆಚ್ಚುವರಿ ಸೆಶನ್ ಹಾಗೂ ಪೋಕ್ಸೋ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1 ರ ನ್ಯಾಯಾಧೀಶ ಎನ್.ಎಂ.ರಮೇಶ್ ಅವರು ಗುರುವಾರ ವಿಚಾರಣೆ ನಡೆಸಿದರು.