ಕನ್ನಡಿಗರಿಗೆ 100% ಮೀಸಲಾತಿಗೆ ವಿರೋಧಿಸಿದ ಖಾಸಗಿ ಕಂಪನಿಗಳು.
ಬೆಂಗಳೂರು: ರಾಜ್ಯ ಸರ್ಕಾರ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ, ಕನ್ನಡಿಗರಿಗೆ ಎಲ್ಲಾ ಖಾಸಗಿ ವಲಯದ ಕೈಗಾರಿಕೆಗಳಲ್ಲಿ, ‘ಸಿ’ ಮತ್ತು ‘ಡಿ’ ಗ್ರೇಡ್‌ನ ಉದ್ಯೋಗಗಳಿಗೆ ಶೇ.100 ಮೀಸಲಾತಿ ಕಲ್ಪಿಸುವ ವಿಧೇಯಕಕ್ಕೆ ಒಪ್ಪಿಗೆ ನೀಡಿದೆ. ಆದರೆ ರಾಜ್ಯದಲ್ಲಿ ಹೂಡಿಕೆ ಮಾಡಿರುವ ಅನೇಕ ಕೈಗಾರಿಕೆಗಳು ಈ ವಿಧೇಯಕಕ್ಕೆ ವಿರೋಧವನ್ನು ವ್ಯಕ್ತಪಡಿಸಿವೆ.
ಭಾರತದ ಎನ್‌ಜಿಒ ಆಗಿರುವ, ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ ಅಂಡ್ ಸರ್ವಿಸ್ ಕಂಪನಿಸ್ (ಎನ್‌ಎಎಸ್‌ಎಸ್‌ಸಿಓಎಮ್), ಕರ್ನಾಟಕ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ವಿಧೇಯಕದ ಕುರಿತು ಗಂಭೀರವಾಗಿ ಚಿಂತಿಸಿದೆ. “ನಾಸ್ಕಾಮ್ ಸದಸ್ಯರು ಈ ಮಸೂದೆಯ ನಿಬಂಧನೆಗಳ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ ಮತ್ತು ಮಸೂದೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾರೆ. ಮಸೂದೆಯ ನಿಬಂಧನೆಗಳು ಈ ಪ್ರಗತಿಯನ್ನು ಹಿಮ್ಮೆಟ್ಟಿಸಲು, ಕಂಪನಿಗಳನ್ನು ಓಡಿಸಲು ಮತ್ತು ಸ್ಟಾರ್ಟಪ್‌ಗಳನ್ನು ನಿಗ್ರಹಿಸುವತ್ತ ಬೆದರಿಕೆ ಹಾಕುತ್ತವೆ, ವಿಶೇಷವಾಗಿ ಹೆಚ್ಚಿನ ಜಾಗತಿಕ ಸಂಸ್ಥೆಗಳು (ಜಿಸಿಸಿ) ರಾಜ್ಯದಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವಾಗ. ಅದೇ ಸಮಯದಲ್ಲಿ, ಸ್ಥಳೀಯ ನುರಿತ ಪ್ರತಿಭೆಗಳು ವಿರಳವಾಗಿರುವುದರಿಂದ ನಿಬಂಧನೆಗಳು ಕಂಪನಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಬಹುದು.” ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದೆ.
ಅದೇ ರೀತಿಯಾಗಿ ಖ್ಯಾತ ಉದ್ಯಮಿ ಟಿ.ವಿ. ಮೋಹನದಾಸ್ ಪೈ ಅವರು ಪ್ರತಿಕ್ರಿಯಿಸಿ, “…ನೀವು ಉದ್ಯೋಗಕ್ಕಾಗಿ ಕನ್ನಡಿಗರನ್ನು ಉತ್ತೇಜಿಸಲು ಬಯಸಿದರೆ, ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಿ. ಅವರಿಗೆ ತರಬೇತಿ ನೀಡಿ. ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಿ. ಇಂಟರ್ನ್‌ಶಿಪ್‌ಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡಿ, ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡಿ. ಇವುಗಳಿಂದ ಅವರೆಲ್ಲರೂ ಕೌಶಲ್ಯಪೂರ್ಣರಾಗುತ್ತಾರೆ. .ಈ ರೀತಿಯ ನಿಬಂಧನೆಗಳಿಂದ ನೀವು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೀರಿ?” ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದರು.
ರಾಜ್ಯದ ಕೈಗಾರಿಕಾ ವಲಯಗಳಲ್ಲಿ, ಸರ್ಕಾರ ನಿರ್ಣಯದಿಂದ ಗೊಂದಲ ಉದ್ಭವಿಸಿದೆ. ಇದನ್ನು ಗಮನಿಸಿದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗಳ ಮೂಲಕ ಕೈಗಾರಿಕೆ ಹಾಗೂ ರಾಜ್ಯದ ಯುವಕರಿಗೆ ಅಭಯ ನೀಡಿದರು. “ಮಸೂದೆಯ ನಿಯಮಗಳನ್ನು ಮಂಡಿಸುವ ಮೊದಲು, ಅವರು ಆಯಾ ಸಚಿವಾಲಯಗಳೊಂದಿಗೆ ಸೂಕ್ತ ಸಮಾಲೋಚನೆಗಳನ್ನು ನಡೆಸುತ್ತಾರೆ ಮತ್ತು ಮುಖ್ಯವಾಗಿ ಉದ್ಯಮದೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಆದ್ದರಿಂದ ಭಯಪಡುವ ಅಗತ್ಯವಿಲ್ಲ. ನಾವು ಉದ್ಯೋಗಗಳನ್ನು ರಕ್ಷಿಸಲಿದ್ದೇವೆ, ಹಾಗೆಯೇ ರಾಜ್ಯದ ಕೈಗಾರಿಕೆಗಳಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸಲಿದ್ದೇವೆ” ಎಂದು ಹೇಳಿದ್ದಾರೆ.