“ಕೊರಗಜ್ಜ” ಚಿತ್ರ ವೀಕ್ಷಿಸಿ ನಿರ್ಮಾಪಕರು ಫಿದಾ: ನಿರ್ದೇಶಕರಿಗೆ ಸಿಕ್ತು ದುಬಾರಿ ಗಿಫ್ಟ್!

ಬೆಂಗಳೂರು: ಬೆಂಗಳೂರಿನ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ “ಕೊರಗಜ್ಜ” ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಮೊದಲ ಪ್ರತಿ ಇನ್ನೇನು ಕೈ ಸೇರಲು ಸಿದ್ಧವಾಗುತ್ತಿರುವ ಸಮಯದಲ್ಲಿ, ಚಿತ್ರದ ಗುಣಮಟ್ಟ, ತಾಂತ್ರಿಕತೆ ಮತ್ತು ಮಾಸ್ ಅಪೀಲ್ ಗೆ ಮಾರಿಹೋದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರು, ಚಿತ್ರ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಟಾಪ್ ಎಂಡ್ ಕಿಯಾ ಕೇರನ್ಸ್ ಕಾರನ್ನು ಗಿಫ್ಟ್ ಮಾಡಿದ್ದಾರೆ.
ಚಲನಚಿತ್ರದ ಸೃಜನಶೀಲತೆಯ ಬಗ್ಗೆ ಮಾತನಾಡಿದ ಕಲಾವಿದೆ ಭವ್ಯ, “ಈ 15 ಕೋಟಿ ಬಜೆಟ್‌ನ ಚಿತ್ರ ನಿರ್ದೇಶಕನ ಸೃಜನಶೀಲತೆ ಮತ್ತು ತಾಂತ್ರಿಕ ನೈಪುಣ್ಯತೆಯನ್ನು ಪ್ರದರ್ಶಿಸುತ್ತಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ಮಾದರಿಯ ಸಿನಿಮಾವಾಗಿದೆ,” ಎಂದರು.
ತಾವು ಇಂತಹ ಮಹತ್ವದ ಸಿನಿಮಾದ ಭಾಗವಾಗಿರುವುದಕ್ಕೆ ಹೆಮ್ಮೆಪಟ್ಟ ಭವ್ಯ, ತಮ್ಮ ಈ ಅನುಭವಕ್ಕೆ ಪುನೀತ ಭಾವ ವ್ಯಕ್ತಪಡಿಸಿದರು.
ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರ ಪ್ರಕಾರ, “ಕೊರಗಜ್ಜ” ಸಿನಿಮಾ 800 ವರ್ಷಗಳ ಹಿಂದೆ ಬದುಕಿದ್ದ “ತನಿಯಾ” ಎಂಬ ಆದಿವಾಸಿ ಯುವಕನ ಕಥೆಯನ್ನು ವಿಶೇಷ ಥ್ರಿಲ್ಲರ್, ಸಸ್ಪೆನ್ಸ್, ಹಾಗೂ ಊಹಿಸಲಾಗದ ತಿರುವುಗಳೊಂದಿಗೆ ಅಚ್ಚುಕಟ್ಟಾದ ತಂತ್ರಜ್ಞಾನದ ಮೂಲಕ ಮೂಡಿಬಂದಿದೆ. ಖ್ಯಾತ ನಟ ಕಬೀರ್ ಬೇಡಿ ನೇತೃತ್ವದ ಯುದ್ಧದ ಸನ್ನಿವೇಶಗಳನ್ನು ಹಾಲಿವುಡ್‌ನ “ವಾಟರ್ ವರ್ಲ್ಡ್” ಚಿತ್ರ ನಿರ್ದೇಶಕ ಕೆವಿನ್ ರೆನಾಲ್ಡ್ಸ್ ಜತೆಗೆ ಹೋಲಿಸುವಷ್ಟು ಅದ್ಭುತವಾಗಿ ನಿರ್ದೇಶಿಸಲಾಗಿದೆ ಎಂದು ತ್ರಿವಿಕ್ರಮ ಅವರು ತೃಪ್ತಿಯಿಂದ ಹೇಳಿದರು.
ಸಿನಿಮಾ ಡಿಸೆಂಬರ್‌ನಲ್ಲಿ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದು, ಅದಕ್ಕಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.