ಆರ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ…!

288, ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿ, 750 ಕ್ಕೂ ಅಧಿಕ ವಿಕೆಟ್ ಗಳನ್ನು ಪಡೆದ, ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ 38 ವರ್ಷದ ರವಿಚಂದ್ರನ್ ಅಶ್ವಿನ್ ತಮ್ಮ ಅಂತರಾಷ್ಟ್ರೀಯ ಕ್ರೀಡಾ ಬದುಕಿಗೆ ಬುಧವಾರ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಅಶ್ವಿನ್ 14 ವರ್ಷಗಳಿಂದ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2011ರ ಏಕದಿನ ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದರು. ಭಾರತದ ಕ್ರಿಕೆಟ್ ಲೋಕದಲ್ಲಿ ಒಬ್ಬ ಮ್ಯಾಚ್ ವಿನ್ನಿಂಗ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಈಗ ಅವರ ದಿಢೀರ್ ನಿವೃತ್ತಿ ಘೋಷಣೆ ಕೇಳಿ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಏಕೆ ವಿದಾಯ ಹೇಳಿದರು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಅಶ್ವಿನ್ ಅವರ ಈ ನಿರ್ಧಾರದ ಹಿಂದಿನ ಸಂಪೂರ್ಣ ಕಥೆ ಇಲ್ಲಿದೆ.
ಅಶ್ವಿನ್ ತಮ್ಮ ನಿವೃತ್ತಿಯ ಬಗ್ಗೆ ಬಹಳ ದಿನಗಳಿಂದ ಯೋಚಿಸುತ್ತಿದ್ದರು. ಕಳೆದ ವರ್ಷವೇ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ ಎಂಬ ವರದಿಗಳು ಕೇಳಿ ಬಂದಿದ್ದವು. 2023ರಲ್ಲಿ ತವರಿನಲ್ಲಿ ನಡೆದ ಕೊನೆಯ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಅವರ ನಿವೃತ್ತಿಯ ಸುದ್ದಿ ಭಾರೀ ಸದ್ದು ಮಾಡಿತ್ತು. ಅಶ್ವಿನ್ ಕೂಡ ವಿದಾಯದ ಮನಸಿನಲ್ಲಿದ್ದರು. ಏಕೆಂದರೆ ಆ ಸಮಯದಲ್ಲಿ ಅಶ್ವಿನ್ ಅವರು ಮೊಣಕಾಲು ಗಾಯದಿಂದ ಬಳಲುತ್ತಿದ್ದರು. ಹೀಗಾಗಿ ಅಶ್ವಿನ್ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು. ಆದರೆ ಅಶ್ವಿನ್ ತಮ್ಮ ನಿರ್ಧಾರವನ್ನು ಅಂದು ಹೇಳಿರಲಿಲ್ಲ.

ವರದಿಯ ಪ್ರಕಾರ, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುಂಚೆಯೇ, ಅಶ್ವಿನ್ ನಿವೃತ್ತಿಯ ಬಗ್ಗೆ ತಮ್ಮ ಕುಟುಂಬಕ್ಕೆ ತಿಳಿಸಿದ್ದರು. ಆದರೆ, ಕುಟುಂಬಸ್ಥರು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಏಕೆಂದರೆ ಅವರ ಕುಟುಂಬಸ್ಥರು ಈ ಬಗ್ಗೆ ಹೆಚ್ಚು ಯೋಚಿಸುವಂತೆ ಅಶ್ವಿನ್ ಅವರಿಗೆ ಸಲಹೆ ನೀಡಿದ್ದರು. ಇದಾದ ನಂತರು ಅವರು ಮಂಗಳವಾರ ರಾತ್ರಿ, ಡಿಸೆಂಬರ್ 18 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ದಿನ ಎಂದು ತಮ್ಮ ಅಂತಿಮ ನಿರ್ಧಾರದ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದರು.
ಅದರಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಅಶ್ವಿನ್ ತಮ್ಮ ನಿರ್ಧಾರವನ್ನು ತಂಡದ ಎಲ್ಲಾ ಆಟಗಾರರಿಗೆ ತಿಳಿಸಿದ್ದರು. ಇದರಿಂದಾಗಿ ಎಲ್ಲರೂ ಆಶ್ಚರ್ಯಚಕಿತರಾದರು. ಆಸ್ಟ್ರೇಲಿಯಾದಲ್ಲಿ ಉಳಿದೆರಡು ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶವೂ ಅಶ್ವಿನ್‌ಗೆ ಇತ್ತು. ಆದರೆ ತಂಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಎರಡು ಟೆಸ್ಟ್‌ಗಳಿಗೂ ಮೊದಲೇ ಅವರು ತಮ್ಮ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದಾರೆ.
ಗೌತಮಿ ಎಂ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ