ರಜಿನಿಕಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಶಸ್ತ್ರ ಚಿಕಿತ್ಸೆ ಇಲ್ಲದೆ ವಾಸಿ ಮಾಡಿದ ಆ ಪವಾಡವೇನು..?!
ಚೆನ್ನೈ: ಸೂಪರ್‌ಸ್ಟಾರ್ ರಜನೀಕಾಂತ್ ಅಭಿಮಾನಿಗಳಿಗೆ ಸಂತಸದ ಸುದ್ದಿ. ಸೆಪ್ಟೆಂಬರ್ 30 ರಂದು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಜನೀಕಾಂತ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಕಳೆದ ಗುರುವಾರ ರಾತ್ರಿ 11 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಚೆನ್ನೈ ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ. 73 ವರ್ಷ ವಯಸ್ಸಿನ ರಜನೀಕಾಂತ್ ಅವರ ಹೃದಯದಿಂದ ಹೊರಬರುವ ಮುಖ್ಯ ರಕ್ತನಾಳದಲ್ಲಿ ಉಬ್ಬುವಿಕೆ ಕಂಡುಬಂದಿದ್ದು, ಅದನ್ನು ಶಸ್ತ್ರಚಿಕಿತ್ಸೆಯಿಲ್ಲದೆ, ಟ್ರಾನ್ಸ್‌ಕ್ಯಾಥೆಟರ್ ವಿಧಾನದಿಂದ ಚಿಕಿತ್ಸೆ ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ, ಎಂಡೊವಾಸ್ಕುಲರ್ ರಿಪೇರ್ ಮೂಲಕ ಸ್ಟೆಂಟ್ ಹಾಕುವ ಮೂಲಕ ಉಬ್ಬುವಿಕೆಯನ್ನು ತಪ್ಪಿಸಲು ಯಶಸ್ವಿಯಾಗಿದ್ದಾರೆ. ಆಸ್ಪತ್ರೆಯು ಅವರ ಅಭಿಮಾನಿಗಳಿಗೆ ಆತಂಕಕ್ಕೀಡಾಗದಂತೆ, ತಮಿಳು ತಾರೆ ರಜನೀಕಾಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಎಲ್ಲವೂ ಯೋಜನೆ ಪ್ರಕಾರವೇ ನಡೆದಿರುವುದಾಗಿ ತಿಳಿಸಿದೆ. ಎರಡೇ ದಿನಗಳಲ್ಲಿ ಡಿಸ್ಚಾರ್ಜ್ ಮಾಡುವ ಭರವಸೆ ನೀಡಿದ ಆಸ್ಪತ್ರೆ, ಅಭಿಮಾನಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.
ಮನೆಯವರ ಪ್ರಾರ್ಥನೆ, ಆಪ್ತರ ಬೆಂಬಲ:
ರಜನೀಕಾಂತ್ ಆಸ್ಪತ್ರೆಯಲ್ಲಿ ಇರುವ ಸಮಯದಲ್ಲಿ ಅವರ ಪುತ್ರಿ ಮತ್ತು ಚಿತ್ರನಿರ್ಮಾಪಕಿ ಸೌಂದರ್ಯ ರಜನೀಕಾಂತ್ ಅವರು ಚೆನ್ನೈನ ತಿರುವೋಟ್ಟಿಯೂರು ಶ್ರೀ ವಡಿವುದೈ ಅಮ್ಮನ್ ದೇವಾಲಯಕ್ಕೆ ತೆರಳಿ ತಂದೆಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಸಾಮಾಜಿಕ ಜಾಲತಾಣದಲ್ಲಿ “ರಜನಿಕಾಂತ್ ಅವರ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ವಿಶ್ವದ ಅನೇಕ ಅಭಿಮಾನಿಗಳಂತೆ ನಾನೂ ಪ್ರಾರ್ಥಿಸುತ್ತಿದ್ದೇನೆ” ಎಂದು ತಮ್ಮ ಬೆಂಬಲ ವ್ಯಕ್ತಪಡಿಸಿದರು. ರಜನಿಕಾಂತ್ ಅವರ ಆಪ್ತ ಸ್ನೇಹಿತ ಹಾಗೂ ಸಮಕಾಲೀನ ಕಮಲ್ ಹಾಸನ್ ಕೂಡಾ ಶೀಘ್ರ ಚೇತರಿಕೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಮುಂದಿನ ಹೆಜ್ಜೆಗಳು:
ಆಸ್ಪತ್ರೆಯಿಂದ ಬಿಡುಗಡೆಯಾದ ರಜನೀಕಾಂತ್ ಅವರ ಮುಂದಿನ ಬಹು ನಿರೀಕ್ಷಿತ ಸಿನಿಮಾ ವೆಟ್ಟೈಯನ್, ಜಗತ್ತಾದ್ಯಂತ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿರುವುದು. ಟಿ.ಜೆ. ಜ್ಞಾನವೆಲ್ ನಿರ್ದೇಶನ ಮತ್ತು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ದುಷರಾ ವಿಜಯನ್ ಹಾಗೂ ಅಭಿರಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಈ ಚಿತ್ರದ ವಿಶೇಷ.
ಇದರ ಜೊತೆಗೆ, ರಜನೀಕಾಂತ್ ಅವರು ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದು, ಶಿವಕಾರ್ತಿಕೇಯನ್ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸುದ್ದಿ ಹರಿದಾಡುತ್ತಿದೆ. ಈ ಚಿತ್ರಕ್ಕೆ ಸಂಗೀತವನ್ನು ಅನಿರುದ್ಧ್ ರವಿಚಂದರ್ ನೀಡುತ್ತಿದ್ದಾರೆ.