ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆ ಸವಾಲಿನ ಪ್ರಶ್ನೆಯಾಗಿ ಎದುರಾಗುತ್ತಿದೆ. ಇತ್ತೀಚೆಗೆ, ಖ್ಯಾತ ರಾಮೇಶ್ವರಂ ಕೆಫೆಯಲ್ಲಿ ನಡೆದ ಪ್ರಕರಣ ಬೆಂಗಳೂರಿನ ಮಹಿಳಾ ಸುರಕ್ಷತೆಯ ಕುರಿತು ಗಂಭೀರ ಚಿಂತನೆ ಮೂಡಿಸಿದೆ. ಈ ಘಟನೆಗಳನ್ನು ವಿವರಿಸಿದ ಬೆಂಗಳೂರಿನ Reddit ಬಳಕೆದಾರ ಮಹಿಳೆಯೊಬ್ಬರು, ತಾವು ಕೆಫೆ ಎದುರಿನ ಸಾಲಿನಲ್ಲಿ ನಿಂತಿದ್ದಾಗ ಒಬ್ಬ ವ್ಯಕ್ತಿ ತಮ್ಮ ಮೇಲೆ ಕೈ ಹಾಕಿದ ಘಟನೆ ಕುರಿತು ತಮ್ಮ ಹತಾಶೆಯನ್ನು ಹಂಚಿಕೊಂಡಿದ್ದಾರೆ.
“ನಾನು ತಕ್ಷಣವೇ ಕಿರುಚಿ ಗಲಾಟೆ ಸೃಷ್ಟಿಸಿದೆ. ಆದರೆ ಅಷ್ಟರಲ್ಲಿ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ,” ಎಂದು ಆಕೆ ಬರೆದಿದ್ದಾರೆ. ಈ ಘಟನೆ ಅವರಿಗೆ ಪುಣೆಯಿಂದ ಬೆಂಗಳೂರಿಗೆ ಬಂದ ನಂತರ, ಆಗಾಗ್ಗೆ ಎದುರಾಗುತ್ತಿರುವ ಅಸಭ್ಯತೆಯ ಘಟನೆಗಳಲ್ಲಿ ಮತ್ತೊಂದಾಗಿದ್ದು, ಈ ನಗರದಲ್ಲಿ ಸುರಕ್ಷತೆಯ ಅಭಾವವೇ ಮುಖ್ಯ ಸಮಸ್ಯೆ ಎಂಬ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
Reddit ಬಳಕೆದಾರರ ತೀವ್ರ ಪ್ರತಿಕ್ರಿಯೆ:
ಈ ಘಟನೆಯಲ್ಲಿ Reddit ಬಳಕೆದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಈ ದೇಶ ಸಂಪೂರ್ಣವಾಗಿ ಹಾಳಾಗಿದೆ,” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಮಹಿಳೆಗೆ ಪೊಲೀಸರಿಗೆ ದೂರು ನೀಡಲು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಸಹಾಯವನ್ನು ಬಳಸಿಕೊಳ್ಳಲು ಸಲಹೆ ನೀಡಿದರು. “ಶಿಕ್ಷಣದ ಕೊರತೆಯೇ ದೇಶಕ್ಕೆ ತೊಂದರೆ,” ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
“ಇಂತಹ ಘಟನೆಗಳು ನಮ್ಮ ಬೆಂಗಳೂರನ್ನು ಮಹಿಳೆಯರಿಗೆ ಅಪಾಯಕಾರಿ ಸ್ಥಳವನ್ನಾಗಿ ಮಾಡುತ್ತಿದೆ. ದಿನನಿತ್ಯದ ಚಟುವಟಿಕೆಗಳಿಗೆ ಹೋಗಲು ಮಹಿಳೆಯರು ಭಯಪಡುವ ಪರಿಸ್ಥಿತಿ ಬಂದಿರುವುದು ನೋವು ನೀಡುತ್ತದೆ,” ಎಂದು ಮತ್ತೊಬ್ಬರು ತಮ್ಮ ಕಳವಳವನ್ನು ಹಂಚಿಕೊಂಡಿದ್ದಾರೆ.