Alma CornerPolitics

ಸಂಸತ್ತಿನ ಅನಗತ್ಯ ದಾಖಲೆ, ಸಂಸದರ ಅಮಾನತೊಂದೇ ಪರಿಹಾರವೇ?

ಏನೀ ಘಟನೆ?…
ನಿಗದಿತ ಅವಧಿಗಿಂತ ಒಂದು ದಿನ ಮುಂಚಿತವಾಗಿಯೇ ಮುಗಿದ 17 ನೇ ಲೋಕಸಭೆಯ ಅಂತಿಮ ಅಧಿವೇಶನವು ಸಂಸತ್ತಿನ ಇತಿಹಾಸದಲ್ಲಿ ಅತೀ ಹೆಚ್ಚು ಅಮಾನತುಗಳ ಮೂಲಕ ಅನಗತ್ಯ ದಾಖಲೆ ನಿರ್ಮಿಸಿದೆ. ಉಭಯ ಸದನಗಳ 146 ಸದಸ್ಯರ ವಿರುದ್ಧ ಆಯಾ ಸದನದ ಸಭಾಧ್ಯಕ್ಷರು ಕ್ರಮ ಕೈಗೊಂಡಿದ್ದಾರೆ. ಕೆಳಮನೆಯಿಂದ 100, ಮೇಲ್ಮನೆಯು 46 ಸಂಸದರನ್ನು ಅಮಾನತುಗೊಳಿಸಿತು. ಲೋಕಸಭೆಯಲ್ಲಾದ ಭದ್ರತಾ ಲೋಪದ ಕುರಿತು ಸದನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪಟ್ಟು ಹಿಡಿದು, ಅಶಿಸ್ತಿನ ನಡವಳಿಕೆ, ಕಲಾಪಕ್ಕೆ ಅಡ್ಡಿಪಡಿಸಿ, ಪೀಠವನ್ನು ಅವಹೇಳಿಸಿದರೆನ್ನುವ ಕಾರಣಗಳಿಂದ ಸಂಸದರನ್ನು ಅಮಾನತುಗೊಳಿಸಲಾಯಿತು.
ಸದನದ ಘನತೆ-ಗೌರವ ಕಾಪಾಡಿ, ಕಲಾಪ ಸುಗಮವಾಗಿ ನಡೆಸುವುದು ಸದನದ ಅಧ್ಯಕ್ಷರ ಜವಾಬ್ದಾರಿ ಎಂದು ನಿಯಮಾವಳಿ ಹೇಳುತ್ತದೆ. ನೂತನ ಸಂಸತ್ ಭವನದಲ್ಲಿ ಇಂತಹ ಪ್ರತಿಭಟನೆಗಳನ್ನು ನಡೆಸಬಾರದು ಎಂಬ ಬದ್ಧತೆಯ ಹೊರತಾಗಿಯೂ ಪ್ರತಿಪಕ್ಷಗಳು ಭಿತ್ತಿಪತ್ರಗಳೊಂದಿಗೆ ಸದನದ ಬಾವಿಗೆ ನುಗ್ಗಿ ಕೋಲಾಹಲ ಸೃಷ್ಟಿಸಿದ್ದರಿಂದ ಸಂಸದರನ್ನು ಅಮಾನತು ಮಾಡಲಾಯಿತೆಂದು ಸಭಾಧ್ಯಕ್ಷರು ತಮ್ಮ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ. ಡಿಸೆಂಬರ್ 13 ರಂದು ಇಬ್ಬರು ಯುವಕರು ಹೊಗೆ ಬಾಂಬ್‌ಗಳೊಂದಿಗೆ ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಗೆ ಜಿಗಿದು ಸದನದಲ್ಲಿ ಗೊಂದಲ ಉಂಟುಮಾಡಿದರು. ಸಂಸತ್ತಿನ ಭದ್ರತಾ ಲೋಪದ ಕುರಿತು ತನಿಖೆ ನಡೆಸಲು ಸ್ಪೀಕರ್ ಮತ್ತು ಕೇಂದ್ರ ಗೃಹ ಸಚಿವಾಲಯ ತಕ್ಷಣವೇ ಎರಡು ಉನ್ನತ ಮಟ್ಟದ ಸಮಿತಿಗಳನ್ನು ರಚಿಸಿದ್ದೂ ಸಮಿತಿಯ ವರದಿಗಾಗಿ ಕಾಯಲಾಗುತ್ತಿದೆ.

ನಿಯಮಾವಳಿ ಹೇಳುವುದೇನು…
ಸಂಸತ್ ಸದಸ್ಯರನ್ನು ಅಮಾನತುಗೊಳಿಸಲು, ನಿಯಮಗಳನ್ನು ಮನಬಂದಂತೆ ಅನ್ವಯಿಸಲು ಸಾಧ್ಯವಾಗದ ರೀತಿಯಲ್ಲಿ ರೂಪಿಸಲಾಗಿದೆ. ನಿಯಮಗಳ ಪ್ರಕಾರ. ಒಬ್ಬ ಸದಸ್ಯ ‘ನಿರಂತರವಾಗಿ, ಉದ್ದೇಶಪೂರ್ವಕವಾಗಿ ಪೀಠವನ್ನು ನಿರ್ಲಕ್ಷಿಸಿ ಅಮರ್ಯಾದೆ ತೋರಿದಾಗ ಮಾತ್ರ ಅಮಾನತುಗೊಳಿಸಬಹುದುʼ. ಪೀಠದ ನಿರ್ದೇಶನವನ್ನು ಕಡೆಗಣಿಸಿದಾಲೂ ಸಂಸದರನ್ನು ಅಮಾನತುಗೊಳಿಸುವಂತಿಲ್ಲ. ಅರ್ಥಾತ್‌ ತೀವ್ರ ಸ್ವರೂಪದ ಧಿಕ್ಕಾರ, ಅತಿರೇಕದ ಪ್ರತಿಭಟನೆಗಳ ಸಂದರ್ಭದಲ್ಲಿ ಮಾತ್ರ ಸದಸ್ಯರನ್ನು ಅಮಾನತುಗೊಳಿಸಬಹುದು ಎಂದು ನಿಯಮ ಹೇಳುತ್ತವೆ. ಅಂದರೆ ಸರ್ಕಾರ ಹಾಗೂ ಸಭಾಧ್ಯಕ್ಷರಿಂದ, ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳವ ಕಾರ್ಯವಾಗಬೇಕು. ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ಸಂವಾದದ ದ್ವಾರ ಮುಚ್ಚಿದರೂ, ಯಾವದೋ ಒಂದು ಕಿಟಕಿಯ ಮೂಲಕ ಸಂವಾದ ನಿರಂತರವಾಗಿರಬೇಕು. ಈ ಕಾರ್ಯಗಳಾದಾಗ ಮಾತ್ರ ಸರ್ಕಾರ, ವಿಪಕ್ಷ ಹಾಗೂ ಸಭಾಧ್ಯಕ್ಷರ ಮಧ್ಯೆ ಸಮತೋಲನ ಕಾಯ್ದುಕೊಳ್ಳಬಹುದು.

ಅಮಾನತು ವಿರೋಧಿಸಿ ವಿಪಕ್ಷಗಳ ಪ್ರತಿಭಟನೆ

ಅಮಾನತು, ಉತ್ತಮ ನಿದರ್ಶನವೇ?…
ಹಿಂದಿನ ಸಂಸತ್ತುಗಳು ಇದಕ್ಕೂ ಕಟುವಾದ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದರೂ, ಬಹುತೇಕ ಸಭಾಧ್ಯಕ್ಷರು ಸದಸ್ಯರನ್ನು ಅಮಾನತು ಮಾಡಲು ಹಿಂಜರಿಯುತ್ತಿದ್ದರು. ಸ್ವತಂತ್ರ ಭಾರತದಲ್ಲಿ ಅತೀ ಹೆಚ್ಚು ಅಡ್ಡಿಪಡಿಸಲಾದ ಲೋಕಸಭೆಗಳಲ್ಲೊಂದಾದ 15ನೇ ಲೋಕಸಭೆಯು ಕೇವಲ 29 ಅಮಾನತುಗಳನ್ನು ಕಂಡಿತ್ತು. ಒಂದಿಡೀ ಅಧಿವೇಶನ 2ಜಿ ಸ್ಪೆಕ್ಟ್ರಮ್ ಹಗರಣದ ಕುರಿತು ಹಾಳಾಯಿತು. ನಂತರ ಕಲ್ಲಿದ್ದಲು ಹಂಚಿಕೆ ಹಗರಣ ಮತ್ತು ಆಂಧ್ರಪ್ರದೇಶ ವಿಭಜನೆ ಇತ್ಯಾದಿ ವಿಷಯಗಳಿದ್ದಾಗ್ಯೂ, 29 ಸದಸ್ಯರನ್ನು ಮಾತ್ರ ಅಮಾನತುಗೊಳಿಸಲಾಗಿತ್ತು. ಅವರಲ್ಲಿ ಹೆಚ್ಚಿನವರನ್ನು ಆಂಧ್ರಪ್ರದೇಶ ವಿಭಜನೆಯ ಹೋರಾಟಕ್ಕಾಗಿ ಅಮಾನತುಗೊಳಿಸಲಾಗಿತ್ತು. ಸಂಸತ್ತೆನ್ನುವುದು ಚರ್ಚೆ-ಸಂವಾದಗಳಿಗೆ ಅತ್ಯುನ್ನತ ವೇದಿಕೆ. ಹಾಗಾಗೀ, ದೇಶದಲ್ಲಿನ ಜ್ವಲಂತ ಸಮಸ್ಯೆಗಳ ಕುರಿತು ಸರ್ಕಾರವನ್ನು ಪ್ರಶ್ನಿಸಿವುದು ಸದಸ್ಯರ ಪ್ರಮುಖ ಹಾಗೂ ಪ್ರಾಥಮಿಕ ಕರ್ತವ್ಯ.
ಈ ಎಲ್ಲ ಘಟನಾವಳಿಗಳಿಂದ, ಚರ್ಚೆ-ಸಂವಾದಗಳಿಗೆ ಸದನ ತನ್ನ ನ್ಯಾಯಸಮ್ಮತತೆಯನ್ನು ಈಗಲೂ ಉಳಿಸಿಕೊಂಡಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಪ್ರತಿಪಕ್ಷಗಳ ಉಪಸ್ಥಿತಿ ಇಲ್ಲದೇ, ಸಂಸತ್ತು ತನ್ನ ಕೆಲಸವನ್ನು ಮಾಡುಲಾಗುತ್ತದೆಯೇ?.. ಈ ಎಲ್ಲ ಕಾರಣಗಳಿಂದಲೇ ಹಿಂದೆ ಸದಸ್ಯರನ್ನು ಅಮಾನತು ಮಾಡಲು ಸಭಾಧ್ಯಕ್ಷರು ಹಿಂದೇಟು ಹಾಕುತ್ತಿದ್ದರು. ಸೋಮನಾಥ್ ಚಟರ್ಜಿ ಸಭಾಧ್ಯಕ್ಷರಾದ ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಡೆತಡೆಗಳು ಮತ್ತು ಗದ್ದಲಗಳನ್ನು ಕಂಡಿದ್ದರೂ ಕೇವಲ ಐವರನ್ನು ಅಮಾನತುಗೊಳಿಸಲಾಗಿತ್ತು. ಹೀಗಿರುವಾಗ ಬಹುತೇಕ ಪ್ರತಿಪಕ್ಷಗಳ ಎಲ್ಲಾ ಸಂಸದರನ್ನು ಅಮಾನತುಗೊಳಿಸುವುದು ಎಷ್ಟರ ಮಟ್ಟಿಗೆ ಸರಿ? ಪ್ರಜಾಪ್ರಭುತ್ವದ ಮೇಲೆ ಇದರಿಂದಾಗುವ ಅಡ್ಡಪರಿಣಾಮಗಳನ್ನೂ ಅಲ್ಲಗಳೆಯುವಂತಿಲ್ಲ.
ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ ಪ್ರಮುಖ ಮಸೂದೆಗಳ ಅಂಗೀಕಾರ…
ಚಳಿಗಾಲದ ಅಧಿವೇಶನವು ಆಂಗ್ಲರ-ಕಾಲದ ಭಾರತೀಯ ದಂಡ ಸಂಹಿತೆ(IPC), ಅಪರಾಧ ಪ್ರಕ್ರಿಯಾ ಸಂಹಿತೆ(CRPC) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು(IEA) ಬದಲಿಸುವ ಮಸೂದೆ, ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, ದೂರಸಂಪರ್ಕ ಕಾಯಿದೆ ಮತ್ತು ಪುಸ್ತಕಗಳ ಮುದ್ರಣ ಮತ್ತು ನೋಂದಣಿ ಕಾಯಿದೆ ಒಳಗೊಂಡಂತೆ ಅರ್ಧ ಡಜನ್ ಮಸೂದೆಗಳನ್ನು ಅಂಗೀಕರಿಸಿತು. ಈ ಎಲ್ಲಾ ಮಸೂದೆಗಳು ಮಹತ್ವದ್ದಾಗಿದ್ದೂ ಜನರ ಜೀವನದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತವೆ. ಆದರೆ, ಈ ಎಲ್ಲ ಮಸೂದೆಗಳನ್ನು ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ, ಚರ್ಚೆ ಇಲ್ಲದೇ ಕೇವಲ ಅಧಿಕಾರದಲ್ಲಿರುವವರು ಮಾತ್ರ ಮಾತನಾಡುವ ಮೂಲಕ ಅಂಗೀಕರಿಸಲಾಯಿತು. ಹೀಗಾಗಿ, ಚರ್ಚೆಗಳು ಎಲ್ಲಾ ದೃಷ್ಟಿಕೋನಗಳಿಂದ ಸಾಕಷ್ಟು ವಿಷಯಜ್ಞಾನದಿಂದ ನಡೆಯುತ್ತಿದೆಯೇ? ಇಲ್ಲವಾದಲ್ಲಿ, ಆ ಚರ್ಚೆಗಳ ಅರ್ಥವೇನು? ಇದು ಒಳ್ಳೆಯ ಪ್ರವೃತ್ತಿಯೇ? ಎಂಬ ಪ್ರಶ್ನೆಗಳು ಹುಟ್ಟುವುದು ಸಹಜ!

ಈ ವಿವಾದಗಳಿಗೆ ಕೊನೆಯೇ ಇಲ್ಲವೇ?.. ಪರಿಹಾರವೇನು?…
ಒಟ್ಟಿನಲ್ಲಿ ಸಂಸತ್ತಿನ ಕಾರ್ಯವೈಖರಿಯನ್ನು ಪುನರ್ವಿಮರ್ಶಿಸುವ ಅಗತ್ಯವಿದೆ. ಪ್ರತಿಪಕ್ಷಗಳಿಗೆ ಸದನದಲ್ಲಿನ ಸಮಯ ಮತ್ತು ಅವಕಾಶದ ಕೊರತೆಯು ವಿವಾದದ ಮೂಲವೆನ್ನುತ್ತಾರೆ ಹಲವರು. ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದು ಮುಖ್ಯವಲ್ಲ. ಪ್ರಾಥಮಿಕವಾಗಿ ಸರ್ಕಾರವು ಕಾರ್ಯಸೂಚಿಯನ್ನು ನಿರ್ಧರಿಸುತ್ತದೆ. ಯಾವ ಪಕ್ಷ ಅಧಿಕಾರದಲ್ಲಿದ್ದರೂ ಹಗ್ಗಜಗ್ಗಾಟ ವರ್ಷಗಳಿಂದ ನಡೆಯುತ್ತಲೇ ಇದೆ. ನಾವು ಮೊದಲು ರಚನಾತ್ಮಕವಾಗಿ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಬ್ರಿಟನ್ ಸಂಸತ್ತು ವರ್ಷದಲ್ಲಿ 20 ದಿನಗಳನ್ನು ವಿರೋಧ ಪಕ್ಷಗಳಿಗಾಗಿಯೇ ಮೀಸಲಿಟ್ಟಿದೆ. ಅದನ್ನು ‘ವಿರೋಧದ ದಿನಗಳು’(Opposition Days) ಎನ್ನುತ್ತಾರೆ. ಆ ದಿನಗಳಲ್ಲಿ ಚರ್ಚೆಯ ವಿಷಯವನ್ನು ಪ್ರತಿಪಕ್ಷಗಳೇ ನಿರ್ಧರಿಸುತ್ತವೆ. ಇದರಿಂದ ಪ್ರತಿಪಕ್ಷಗಳು ಸಹ ತಮ್ಮ ವಾದವನ್ನು ಸರ್ಕಾರದ ಮುಂದೆ ಹಾಗೂ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಇಡಬಹುದು. ಹೀಗೆ ಸರ್ಕಾರ, ಪ್ರತಿಪಕ್ಷ ಹಾಗೂ ಸಂಸತ್ತು ತಮ್ಮ ಕರ್ತವ್ಯಗಳನ್ನು ಅರ್ಥಪೂರ್ಣವಾಗಿ ನಿಭಾಯಿಸಬಹುದು.

Show More

Leave a Reply

Your email address will not be published. Required fields are marked *

Related Articles

Back to top button