ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆ ಇರುವುದನ್ನು ಬಹು ವರ್ಷಗಳಿಂದ ಕಾಣಲಾಗುತ್ತಿದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರ ಕೊರತೆಯನ್ನು ನೀಗಿಸಲು, ಸರ್ಕಾರವು 7,500 ಪ್ರಾಥಮಿಕ, 2500 ಪ್ರೌಢ ಶಾಲೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಿದೆ. ಒಟ್ಟು 10,000 ಶಿಕ್ಷಕರ ನೇಮಕಾತಿ ನಡೆಯಲಿದೆ.
ಈ ಕುರಿತು ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾದ ಶ್ರೀ ಮಧು ಬಂಗಾರಪ್ಪನವರು “ಶೀಘ್ರದಲ್ಲೇ 7,500 ಪ್ರಾಥಮಿಕ, 2,500 ಪ್ರೌಢಶಾಲೆ ಶಿಕ್ಷಕರು ಸೇರಿದಂತೆ ಒಟ್ಟು 10,000 ಶಿಕ್ಷಕರ ನೇಮಕ ಮಾಡಲಾಗುವುದು.” ಎಂದು ತಿಳಿಸಿದ್ದಾರೆ.
ನೇಮಕಾತಿಯಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ಈ ಬಾರಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಶಿಕ್ಷಕರ ಹುದ್ದೆಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದಂತಾಗಿದೆ.