“ರೆಕ್ಕೆ ಇದ್ದರೆ ಸಾಕೆ”: ‘ಸಿಂಪಲ್ ಕ್ವೀನ್’ ಶ್ವೇತಾ ಶ್ರೀವಾಸ್ತವ್ ಈಗ ಲೇಖಕಿ..?!
ಬೆಂಗಳೂರು: ನಟಿಯಿಂದ ಲೇಖಕಿಯ ಹಾದಿ ಹಿಡಿದಿದ್ದಾರೆ ಶ್ವೇತಾ ಶ್ರೀವಾಸ್ತವ್. ಚಿತ್ರರಂಗದಲ್ಲಿ ತಮ್ಮ ಪ್ರಯಾಣವನ್ನು ಇದೀಗ “ರೆಕ್ಕೆ ಇದ್ದರೆ ಸಾಕೆ” ಎಂಬ ಹೆಸರಿನ ಬಯೋಪಿಕ್ ರೀತಿಯ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕ ಇಂಗ್ಲಿಷ್ನಲ್ಲಿ “Against the Grain” ಎಂಬ ಹೆಸರಿನಲ್ಲೂ ಲಭ್ಯವಿದೆ.
2006 ರಲ್ಲಿ “ಮುಖಾಮುಖಿ” ಮೂಲಕ ಚಿತ್ರರಂಗ ಪ್ರವೇಶಿಸಿ, “ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ,” “ಕಿರೂಗೂರಿನ ಗಯ್ಯಾಳಿಗಳು,” “ರಾಘವೇಂದ್ರ ಸ್ಟೋರ್ಸ್” ಸೇರಿದಂತೆ ಹಲವಾರು ಚಿತ್ರಗಳಿಂದ ಕನ್ನಡಿಗರ ಮನ ಗೆದ್ದ ಶ್ವೇತಾ, ಈಗ ಹೊಸ ಪಯಣಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ನಯನ ಸಭಾಂಗಣದಲ್ಲಿ ಈ ಪುಸ್ತಕವನ್ನು ಅನಾವರಣಗೊಳಿಸಿ, ತಮ್ಮ ಅನುಭವಗಳನ್ನು ಹಂಚಿಕೊಂಡರು.
ಶ್ವೇತಾ, ತಮ್ಮ ಹೆಣ್ಣುಮಕ್ಕಳ ಸವಾಲುಗಳು ಮತ್ತು ಚಿತ್ರರಂಗದ ಮಹಿಳಾ ಸಾಧನೆಗಳ ಕುರಿತು ಮಾತನಾಡುತ್ತಾ, “ಇನ್ನು ಹೆಣ್ಣುಮಕ್ಕಳು ಮದುವೆಯಾದ ಬಳಿಕ ನಾಯಕಿಯಾಗಿ ನಟಿಸಬಾರದು ಎಂಬ ನಂಬಿಕೆ ನನಗೆ ನನ್ನ ಹಾದಿಯಲ್ಲಿ ಅತಿ ದೊಡ್ಡ ಸವಾಲಾಗಿತ್ತು,” ಎಂದು ಹಂಚಿಕೊಂಡರು. ತಮ್ಮ ಎರಡು ದಶಕಗಳ ಚಿತ್ರರಂಗದ ಜೀವನವನ್ನು ಈ ಪುಸ್ತಕದಲ್ಲಿ “ಸಾಧನೆ” ಎಂದೂ ಕರೆಯುತ್ತಾರೆ.
ಇದನ್ನು ಬಯೋಪಿಕ್ ಎಂದು ಕರೆಯಬಹುದಾದ ಈ ಪುಸ್ತಕದ ಕುರಿತು ಶ್ವೇತಾ, “ಮೊದಲು ಇಂಗ್ಲಿಷ್ನಲ್ಲಿ ಬರೆದಿದ್ದರೂ, ಕನ್ನಡದ ಬಗ್ಗೆ ಪ್ರೀತಿ ಹಾಗೂ ಸೆಂಟಿಮೆಂಟ್ ಕಾರಣ ಕನ್ನಡದಲ್ಲಿಯೂ ಬರೆಯುವ ಪ್ರೇರಣೆ ಕಂಡಿತು,” ಎಂದರು.
ಪತಿ ಅಮಿತ್ ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಶ್ವೇತಾ, ಆನ್ಲೈನ್ ಮೂಲಕ 15 ದೇಶಗಳಲ್ಲಿ ಈ ಪುಸ್ತಕ ಬಿಡುಗಡೆ ಮಾಡಿರುವುದನ್ನು ಖುಷಿಯಿಂದ ಹಂಚಿಕೊಂಡರು.
ಶ್ವೇತಾ ಶ್ರೀವಾಸ್ತವ್ ತಮ್ಮ ಬರಹಗಳ ಮೂಲಕ ಹೊಸ ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದು, ಮುಂದೆ ಈ ಪುಸ್ತಕದ ಬಗ್ಗೆ ಸಕಾರಾತ್ಮಕ ಚರ್ಚೆಯಾಗಿ ಉತ್ತಮ ಅಭಿಪ್ರಾಯ ಜನರಿಂದ ಬರಲಿ ಎಂಬುದೇ ಆಶಯ.