ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಜಾಮೀನು ಅರ್ಜಿ ಸ್ವೀಕರಿಸಿತೇ ನ್ಯಾಯಾಲಯ..?!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರನಟ ದರ್ಶನ್ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಪ್ರಕರಣವು ರಾಜ್ಯಾದ್ಯಾಂತ ಕುತೂಹಲವನ್ನೇ ಎಬ್ಬಿಸಿದೆ, ಇತ್ತೀಚಿನ ವರದಿಗಳ ಪ್ರಕಾರ ಸಿಟಿ ಸಿವಿಲ್ ನ್ಯಾಯಾಲಯ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ.
ನಟ ದರ್ಶನ್ ಅವರಿಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಪೊಲೀಸ್ ಅಧಿಕಾರಿಗಳು ತಮ್ಮ ತನಿಖೆ ಇನ್ನೂ ಪೂರ್ಣಗೊಳಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದು, ಇದರ ಪರಿಣಾಮವಾಗಿ ವಿಚಾರಣೆ ಮುಂದೂಡಿಕೆಯಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 25 ರಂದು ನಡೆಯಲಿದ್ದು, ಎಲ್ಲರ ಕಣ್ಣೂ ಈಗ ಈ ಪ್ರಕರಣದ ಮುಂದಿನ ಬೆಳವಣಿಗೆಯ ಮೇಲೆ ನೆಟ್ಟಿದೆ. 3,991 ಪುಟಗಳ ದೋಷಾರೋಪಣಾ ಪಟ್ಟಿಯಲ್ಲಿ ದರ್ಶನ್ ಎರಡನೇ ಆರೋಪಿ ಎಂದು ನಮೂದಿಸಲಾಗಿದ್ದು, ಅವರ ಜಾಮೀನು ಅರ್ಜಿ ಕುರಿತು ಸದ್ಯದ ಮಟ್ಟಿಗೆ ನಿರ್ಧಾರ ಮುಂದೂಡಿರುವುದು ದೊಡ್ಡ ಕುತೂಹಲವನ್ನು ಹುಟ್ಟುಹಾಕಿದೆ.