ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಸ್ವಾಮಿ ಪತ್ನಿ: ಪುನರ್ಜನ್ಮ ಎಂದ ಕುಟುಂಬ..?!
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿಯ ಭೀಕರ ಕೊಲೆಯ ಬಳಿಕ ನಾಲ್ಕು ತಿಂಗಳು ಕಳೆದಿದೆ. ಈ ದುಃಖದ ನಂತರ, ಅವರ ಪತ್ನಿ ಸಹನಾ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿ, ಕುಟುಂಬಕ್ಕೆ ಹೊಸ ಜೀವನದ ಆಶಾ ಕಿರಣ ತಂದಿದ್ದಾರೆ. ರೇಣುಕಸ್ವಾಮಿಯ ಕೊಲೆಯ ಆರೋಪದಲ್ಲಿ ನಟ ದರ್ಶನ್ ತೂಗುದೀಪ ಮತ್ತು ಅವರ ಸ್ನೇಹಿತರು ಆರೋಪಿಯಾಗಿದ್ದು, ಪ್ರಕರಣ ಇನ್ನೂ ತನಿಖೆಯಲ್ಲಿದೆ.
ಸಹನಾ ಐದು ತಿಂಗಳ ಗರ್ಭಿಣಿಯಾಗಿದ್ದಾಗ ರೇಣುಕಸ್ವಾಮಿ ಬರ್ಬರವಾಗಿ ಹತ್ಯೆಗೀಡಾಗಿದ್ದರು. ಇಂದು ಬೆಳಗ್ಗೆ 6:55ಕ್ಕೆ ಚಿತ್ತದುರ್ಗದ ಕೀರ್ತಿ ಆಸ್ಪತ್ರೆಯಲ್ಲಿ ಸಹನಾ, ಆರೋಗ್ಯಕರ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಹನಾ ಅವರು ತಾಯಿ ಆಗುವ ಕನಸು “ನಾರ್ಮಲ್ ಡೆಲಿವರಿ” ಮೂಲಕ ನನಸಾಗಿದೆ, ಮತ್ತು ಆಸ್ಪತ್ರೆಯ ವೈದ್ಯರು ನೀಡಿದ ಉಚಿತ ಚಿಕಿತ್ಸೆಗಾಗಿ ಎಲ್ಲರಿಂದ ಪ್ರಶಂಸೆ ಪಡೆದಿದ್ದಾರೆ.
ಕುಟುಂಬಕ್ಕೆ ಹೊಸ ಆಶಾಕಿರಣ:
ನಾವು ಎದುರಿಸಿದ ಕಠಿಣ ಪರಿಸ್ಥಿತಿಯಲ್ಲೂ ಮಗುವಿನ ಜನ್ಮವು ಕುಟುಂಬಕ್ಕೆ ಹೊಸ ಸಂತೋಷವನ್ನು ತಂದಿದೆ ಎಂದು ರೇಣುಕಸ್ವಾಮಿಯ ತಂದೆ ಕಾಶಿನಾಥಯ್ಯ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಕೀರ್ತಿ ಆಸ್ಪತ್ರೆಯ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಮ್ಮ ಕುಟುಂಬದಲ್ಲಿ ಹೊಸ ಬೆಳಕಿನ ಹಾಗೆ ಈ ಮಗು ಬಂದಿದ್ದು, ನಮ್ಮ ಹೃದಯದ ನೋವನ್ನು ಅಲ್ಪಮಟ್ಟಿಗೆ ಕಡಿಮೆ ಮಾಡಿದೆ. ನಮಗೆ ನಮ್ಮ ಮಗ ರೇಣುಕಸ್ವಾಮಿಯ ಪುನರ್ಜನ್ಮವೇ ಆಗಿದೆಯೆಂದು ಅನ್ನಿಸುತ್ತಿದೆ,” ಎಂದಿದ್ದಾರೆ.