ಪ್ರತ್ಯೇಕ ರಾಷ್ಟ್ರದ ಬೇಡಿಕೆಯಿಟ್ಟ ಬಂಡೆ ಬ್ರದರ್


ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ತೆರಿಗೆ ಹಣ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸುವ ಬರದಲ್ಲಿ, ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ‘ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮುಂದಿಡಬೇಕಾಗುತ್ತದೆ’. ಎಂಬ ಹೇಳಿಕೆಯ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇಂದು ಸಂಸತ್ತಿನಲ್ಲಿ ಈ ಹೇಳಿಕೆಯ ವಿರುದ್ದ ಬಿಜೆಪಿ ಬಣದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ‘ಕಾಂಗ್ರೇಸ್ ಪಕ್ಷದ್ದು ಅಖಂಡ ಭಾರತವನ್ನು ತುಂಡು ಮಾಡುವ ಮನಸ್ಥಿತಿ.’ ಎಂದು ತನ್ನ ವಿರೋಧವನ್ನು ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ ಹೊರಹಾಕಿದೆ. ಇದರ ವಿರುದ್ಧವಾಗಿ ‘ರಾಷ್ಟ್ರ ಧ್ವಜವನ್ನು ತಾಲಿಬಾನ್ ಗೆ ಹೋಲಿಸಿದ ಪಕ್ಷದವರ ಬಾಯಿಂದ ದೇಶಭಕ್ತಿಯ ಪಾಠ ಹೇಳಿಸಿಕೊಳ್ಳುವ ದೌರ್ಭಾಗ್ಯ ಕಾಂಗ್ರೆಸ್ ಗೆ ಇಲ್ಲ’ ಎಂದು ಡಿ.ಕೆ.ಸುರೇಶ್ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಂಸದರ ಈ ರೀತಿಯ ಹೇಳಿಕೆಗಳು, ಚುನಾವಣೆಯ ಮೇಲೆ ಪ್ರಭಾವ ಬೀರುತ್ತದೆ. 21ನೇ ಶತಮಾನದ ರಾಜಕೀಯ ರಂಗ ಸಂಪೂರ್ಣವಾಗಿ ಬದಲಾಗಿದೆ. ನಾಯಕರು ತಾವು ನುಡಿಯುವ ಮಾತಿನ ಮೇಲೆ ಹಿಡಿತವಿಡದಿದ್ದರೆ, ಸಾಮಾಜಿಕ ಜಾಲತಾಣಗಳು ಅವರನ್ನು ನುಂಗಿಬಿಡುತ್ತವೆ.
ಅಖಂಡ ಭಾರತದ ಕನಸನ್ನು ಕಟ್ಟಿಕೊಟ್ಟಿರುವ ಭಾರತೀಯ ಜನತಾ ಪಕ್ಷಕ್ಕೆ, ಡಿ.ಕೆ.ಸುರೇಶ್ ಅವರ ಈ ಹೇಳಿಕೆ, ಬಿಜೆಪಿಯ ಪರವಾಗಿ ಬಿದ್ದ ದಾಳದಂತಾಗಿದೆ. ಈಗಾಗಲೇ ಬಿಜೆಪಿ ಪರವಾದ ಸಾಮಾಜಿಕ ಜಾಲತಾಣಗಳು ಈ ಹೇಳಿಕೆಯನ್ನು ಚೆನ್ನಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ರಾಮಮಂದಿರದ ಆಮಂತ್ರಣವನ್ನು ತಿರಸ್ಕರಿಸಿ, ಹಿಂದೂ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ, ಡಿ.ಕೆ.ಸುರೇಶ್ ಅವರ ಈ ಹೇಳಿಕೆ ಮುಂದೆ ‘ದೇಶ ವಿರೋಧಿಗಳು’ ಎಂದು ಹಣೆಪಟ್ಟಿ ಕಟ್ಟಲು ಬಹುದು. ಮುಂದೆ ಈ ವಿವಾದ ಹೇಗೆ ತಿರುವು ಕಾಣಲಿದೆ ಎಂಬುದು ಕಾದು ನೋಡಬೇಕಿದೆ.