ಸ್ಯಾಂಡಲ್‌ವುಡ್ ಹಿರಿಯ ನಟ ಟಿ. ತಿಮ್ಮಯ್ಯ ವಿಧಿವಶ: ಚಿತ್ರರಂಗದ ಗಣ್ಯರ ಕಂಬನಿ!
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಮತ್ತು ಖ್ಯಾತ ನಟ ಟಿ. ತಿಮ್ಮಯ್ಯ ಅವರು ನವೆಂಬರ್ 16, 2024 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 92 ವರ್ಷ ವಯಸ್ಸು ಪೂರೈಸಿದ ತಿಮ್ಮಯ್ಯ, ಕೇವಲ ಚಿತ್ರರಂಗದ ಪಾತ್ರಧಾರರಷ್ಟೇ ಅಲ್ಲ, ಪ್ರೇಕ್ಷಕರ ಹೃದಯ ಗೆದ್ದ ನಟರಾಗಿ ಹೆಸರು ಮಾಡಿದ್ದರು.
ಟಿ. ತಿಮ್ಮಯ್ಯ ತಮ್ಮ ಅಭೂತಪೂರ್ವ ಅಭಿನಯದ ಮೂಲಕ ಚಲಿಸುವ ಮೋಡಗಳು, ಬಂಧನ, ಪ್ರತಿಧ್ವನಿ, ಬೆಂಕಿಯ ಬಲೆ, ಪರಮೇಶಿ ಪ್ರೇಮ ಪ್ರಸಂಗ, ಭಾಗ್ಯದ ಲಕ್ಷ್ಮಿ ಬಾರಮ್ಮ, ಕರ್ಣ, ಕುರುಕ್ಷೇತ್ರ, ನಿಶ್ರ್ಕರ್ಷ, ಬೆಳದಿಂಗಳ ಬಾಲೆ ಮುಂತಾದ ಹಲವು ಯಶಸ್ವಿ ಕನ್ನಡ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು.
ತಿಮ್ಮಯ್ಯ ಅವರು ಪ್ರಖ್ಯಾತ ನಿರ್ದೇಶಕರಾದ ದೊರೈ-ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಂಗೀತಂ ಶ್ರೀನಿವಾಸ್ ರಾವ್, ಕೆ.ವಿ. ಜಯರಾಮ್ ಮತ್ತು ಹಲವರೊಂದಿಗೆ ಕೆಲಸ ಮಾಡಿದ್ದಾರೆ.
ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಅನಂತ್ ನಾಗ್ ಹಾಗೂ ಇನ್ನೂ ಹಲವಾರು ಕನ್ನಡದ ಮೇರು ನಟರೊಂದಿಗೆ ಅಭಿನಯಿಸಿದ್ದ ತಿಮ್ಮಯ್ಯ, ಶ್ರೇಷ್ಠ ಪೋಷಕ ನಟನಾಗಿ ಗುರುತಿಸಿಕೊಂಡಿದ್ದಾರೆ.
ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಇವರ ಅಗಲಿಕೆಯ ಸುದ್ದಿ ಕೇಳಿ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.