Politics

ರಾಹುಲ್ ಗಾಂಧಿ ಪರ ನಿಂತ ಶಂಕರಾಚಾರ್ಯ ಸ್ವಾಮಿ.

ನವದೆಹಲಿ: ರಾಜಕೀಯ ಹಾಗೂ ಸ್ವಾಮಿಜಿಗಳು ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು ಇದೇನು ಮೊದಲಲ್ಲ. ರಾಜ್ಯದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಈ ಬೆಳವಣಿಗೆ ಹಿಂದಿನಿಂದ ನಡೆದು ಬಂದಿದೆ. ಈಗ ಅದೇ ದಾರಿಯಲ್ಲಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದಜೀ ಹೆಜ್ಜೆ ಇಟ್ಟಿದ್ದಾರೆ. ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಚಕಾರ ಎತ್ತಿದ್ದ ಸ್ವಾಮಿಜಿಗಳು, ಈಗ ಮತ್ತೆ, ರಾಹುಲ್ ಗಾಂಧಿ ಅವರ ಪರವಾಗಿ ನಿಂತು ಸುದ್ದಿಗೆ ಬಂದಿದ್ದಾರೆ.

“ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ಮಾಡಿದ ಸಂಪೂರ್ಣ ಭಾಷಣವನ್ನು ನಾನು ಕೇಳಿದ್ದೇನೆ. ಅವರು ಹಿಂದೂ ಧರ್ಮದ ವಿರುದ್ಧವಾಗಿ ಏನನ್ನೂ ಮಾತನಾಡಿಲ್ಲ. “ಹಿಂದೂ ಧರ್ಮದಲ್ಲಿ ಹಿಂಸೆಗೆ ಸ್ಥಾನವಿಲ್ಲ” ಎಂದು ಅವರು ಹೇಳುತ್ತಾರೆ. ಅವರು ಹಾಗೆ ಮಾತನಾಡಲಿಲ್ಲ ಎಂದಾದ ಮೇಲೆ ಅವರ ವಿರುದ್ಧ ಇಂತಹ ಆರೋಪ ಮಾಡುವುದು, ಅವರ ಭಾಷಣದ ಅರ್ಧದಷ್ಟು ಹೇಳಿಕೆಯನ್ನು ಹರಡಿ, ಅಪಪ್ರಚಾರ ಮಾಡುವುದು ಅಪರಾಧವಾಗಿದೆ. ಇದನ್ನು ಮಾಡಿದ ವ್ಯಕ್ತಿಗೆ ಶಿಕ್ಷೆ ಆಗಬೇಕು. ಹೀಗೆ ಮಾಡುವವರು ಪತ್ರಕರ್ತರೇ ಆಗಿದ್ದರೂ, ವಿದ್ಯುನ್ಮಾನ ಮಾಧ್ಯಮವೇ ಆಗಿದ್ದರೂ, ಅದು ತಪ್ಪು. ಆ ವ್ಯಕ್ತಿ ಹಿಂದೂ ಧರ್ಮದ ವಿರುದ್ಧ ಮಾತನಾಡೇ ಇಲ್ಲ ಎಂದಾದ ಮೇಲೆ ಅವರ ವಿರುದ್ಧ ಅಪಪ್ರಚಾರ ಮಾಡುವುದು ತಪ್ಪು. “ಹಿಂದೂಗಳು ಹೀಗೆ ಮಾಡುವುದಿಲ್ಲ”, “ಹಿಂದೂಗಳು ಹಿಂಸೆ ಮಾಡುವುದಿಲ್ಲ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. “ನಿಮ್ಮನ್ನು ನೀವು ಹಿಂದೂಗಳು ಎಂದು ಹೇಳಿಕೊಂಡು ಹಿಂಸೆ, ದ್ವೇಷ ಹರಡುತ್ತಿದ್ದೀರಿ.” ಎಂದು ಎದುರಿಗಿರುವ ಪಕ್ಷದವರಿಗೆ ಹೇಳುತ್ತಾರೆ. ಅವರ ಹೇಳಿಕೆ, ಆ ಪಕ್ಷದವರಿಗೆ ಮಾತ್ರವೇ ಸೀಮಿತವಾಗಿತ್ತು. ಅವರು ಆರಂಭದಲ್ಲಿ ಏನು ಮಾತನಾಡಿದರೊ ಆಗ ‘ಹಿಂದೂ’ ಬಗ್ಗೆ ಮಾತನಾಡಿದ್ದಾರೆ. ನಾನು ಅವರ ಸಂಪೂರ್ಣ ಭಾಷಣ ನೋಡಿರುವುದರಿಂದ, ನನ್ನ ಮನಸ್ಸಿನಲ್ಲಿ ಅವರ ವಿರುದ್ಧದ ಯಾವ ಭಾವನೆ ಇಲ್ಲ.” ಎಂದು ಸ್ವಾಮೀಜಿಯವರು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ‘ಹಿಂದೂಗಳು ಹಿಂಸೆಯನ್ನು ಇಷ್ಟಪಡುತ್ತಾರೆ’ ಎಂದು ಹೇಳಿದರು ಎಂದು ಭಾರತೀಯ ಜನತಾ ಪಕ್ಷದ ಸಂಸದರು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರೋಪಿಸಿದ್ದರು. ಈ ಆರೋಪಕ್ಕೆ ಸ್ವತಹ ಹಿಂದೂ ಧರ್ಮದ ಸ್ವಾಮೀಜಿಗಳು ವಿರೋಧವನ್ನು ವ್ಯಕ್ತಪಡಿಸಿರುವಾಗ, ಈ ಕುರಿತು ಬಿಜೆಪಿಯ ಮುಖಂಡರ ಪ್ರತಿಕ್ರಿಯೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ.

Show More

Leave a Reply

Your email address will not be published. Required fields are marked *

Related Articles

Back to top button