ಟೀಸರ್ ನಲ್ಲೇ ಕುತೂಹಲ ಹೆಚ್ಚಿಸಿದ ಶಿವರಾಜಕುಮಾರ್ ಅಭಿನಯದ “ಭೈರತಿ ರಣಗಲ್”!
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡುತ್ತ, ಬಹು ನಿರೀಕ್ಷಿತ “ಭೈರತಿ ರಣಗಲ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿರುವ ಈ ಸಿನಿಮಾ ಶಿವಣ್ಣನ ಅಬ್ಬರದ ಲುಕ್ ಮತ್ತು ಬಿಗ್ ಬಜೆಟ್ ಸೀನ್‌ಗಳಿಂದಲೇ ಕುತೂಹಲ ಉಂಟುಮಾಡಿದೆ.
“ಮಫ್ತಿ” ಚಿತ್ರದ ಪ್ರೀಕ್ವೆಲ್ ಆಗಿರುವ “ಭೈರತಿ ರಣಗಲ್” ಚಿತ್ರಕ್ಕೆ ಮುಂಚಿನ ಚಿತ್ರಕ್ಕಿಂತಲೂ ಹೆಚ್ಚು ನಿರೀಕ್ಷೆಗಳು ಇವೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶಿವಣ್ಣನ ಪವರ್ ಫುಲ್ ಪರ್ಫಾರ್ಮೆನ್ಸ್ ಮತ್ತೊಮ್ಮೆ ಗಮನ ಸೆಳೆಯಲಿದೆ ಎಂದು ಅಭಿಮಾನಿಗಳು ನಂಬಿಕೆ ಹೊಂದಿದ್ದಾರೆ.
ಅಭಿಮಾನಿಗಳಲ್ಲಿ ಭಾರೀ ಕುತೂಹಲ: ಗೀತಾ ಶಿವರಾಜಕುಮಾರ್ ಅವರ ನಿರ್ಮಾಣದ ಈ ಚಿತ್ರವು ನರ್ತನ್ ನಿರ್ದೇಶನದ ಹೊಸ ಪ್ರಯೋಗವಾಗಿದ್ದು, ಚಿತ್ರದ ಟೀಸರ್ ನೋಡಿ ಶಿವಣ್ಣ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದ “ಟೈಟಲ್ ಸಾಂಗ್” ಮತ್ತು ಟೀಸರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಚಿತ್ರದಲ್ಲಿ ರುಕ್ಮಿಣಿ ವಸಂತ್ ಶಿವಣ್ಣನಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸಂಗೀತ ನಿರ್ದೇಶನಕ್ಕೆ ರವಿ ಬಸ್ರೂರ್, ಛಾಯಾಗ್ರಹಣಕ್ಕೆ ನವೀನ್ ಕುಮಾರ್, ಸಂಕಲನಕ್ಕೆ ಆಕಾಶ್ ಹಿರೇಮಠ ಮತ್ತು ಸಾಹಸ ದೃಶ್ಯಗಳಿಗೆ ದಿಲೀಪ್ ಸುಬ್ರಹ್ಮಣ್ಯ ಮತ್ತು ಚೇತನ್ ಡಿಸೋಜ ಸಾಥ್ ಕೊಟ್ಟಿದ್ದಾರೆ.
ನವೆಂಬರ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ “ಭೈರತಿ ರಣಗಲ್” ಸಿನಿಮಾ ಮತ್ತೊಮ್ಮೆ ಶಿವರಾಜಕುಮಾರ್ ಅವರ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ.