ಆಘಾತಕಾರಿ ರಹಸ್ಯ ಬಹಿರಂಗ: ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಿದ್ದು ದೃಢ..?!
ಅಮರಾವತಿ: ಅನ್ವೇಷಣಾ ವರದಿಯ ಆಧಾರದಂತೆ, ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯದ ಪ್ರಸಾದವಾಗಿ ನೀಡುವ ಪ್ರಸಿದ್ಧ ಲಡ್ಡು ತಯಾರಿಕೆಯಲ್ಲಿ ಮಾಂಸಾಹಾರಿ ತೈಲಗಳನ್ನು ಬಳಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಕುರಿತಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ನ.ಚಂದ್ರಬಾಬು ನಾಯ್ಡು ಕಿಡಿಕಾರಿದ್ದು, ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟ ಕಾಪಾಡಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ನಾಯ್ಡು ಅವರ ಆರೋಪಗಳಂತೆ, ಹಿಂದಿನ ಸರ್ಕಾರದ ಅವಧಿಯಲ್ಲಿ ತಯಾರಾದ ಲಡ್ಡುಗಳಲ್ಲಿ ಸಾಂಪ್ರದಾಯಿಕ ತುಪ್ಪದ ಬದಲು ಪ್ರಾಣಿದ್ರವ್ಯಗಳಾದ ಮೀನು ಎಣ್ಣೆ, ಗೋಮಾಂಸದ ಕೊಬ್ಬು ಮತ್ತು ಲಾರ್ಡ್ (ಹಂದಿ ಕೊಬ್ಬು) ಬಳಕೆಯಾಗಿದೆ. ಈ ವಿಚಾರವು ಭಾರಿ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದು, ವೈಎಸ್‌ಆರ್‌ಸಿಪಿ ಪಕ್ಷವು ಈ ಆರೋಪವನ್ನು ತಳ್ಳಿ ಹಾಕಿದೆ.
ಗುಜರಾತ್‌ನ ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್‌ನ ಸೆಂಟರ್ ಆಫ್ ಅನಾಲಿಸಿಸ್ ಆಂಡ್ ಲರ್ನಿಂಗ್ ಇನ್ ಲೈವ್‌ಸ್ಟಾಕ್ ಅಂಡ್ ಫುಡ್ (CALF) ಸಂಶೋಧನಾ ವರದಿಯ ಪ್ರಕಾರ, ಈ ಲಡ್ಡುಗಳಲ್ಲಿ ಗೋಮಾಂಸದ ಕೊಬ್ಬು ಮತ್ತು ಮೀನು ಎಣ್ಣೆ ಸೇರಿದಂತೆ ಪ್ರಾಣಿದ್ರವ್ಯಗಳ ಅಂಶಗಳು ಪತ್ತೆಯಾಗಿವೆ. ಇದು ಹಲವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ.
ತಿರುಪತಿ ಲಡ್ಡು ಪ್ರಸಾದವು ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ನೀಡಲಾಗುತ್ತದೆ, ಇದು ತಿರುಮಲ ತಿರುಪತಿ ದೇವಸ್ಥಾನಂ (TTD) ಅವರ ನಿಯಂತ್ರಣದಲ್ಲಿ ನಡೆಯುತ್ತದೆ. ಈ ಬಗ್ಗೆ ಆಂಧ್ರದ ಐಟಿ ಸಚಿವ ನಾರಾ ಲೋಕೇಶ್ ಸಹ ಕಿಡಿಕಾರಿದ್ದು, ಈ ವಿಷಯವು ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ.