Bengaluru

ಬೆಂಗಳೂರಿನಲ್ಲಿ ಮೊದಲ ಬಾರಿಗೆ “ಶ್ರೀ ಗುರು ರಾಘವೇಂದ್ರ ಉತ್ಸವ”: ಭಕ್ತಾಧಿಗಳಿಗೆ ವಿಶೇಷ ಅನುಭವ..!

ಬೆಂಗಳೂರು: ಬೆಂಗಳೂರು ನಗರದ ಶಾಲಿನಿ ಮೈದಾನದಲ್ಲಿ ಜನವರಿ 5 ರಂದು ಭಾನುವಾರ, ಸಿರಿ ಕನ್ನಡ ವಾಹಿನಿಯು ಆಯೋಜಿಸಿರುವ ಪ್ರಥಮ “ಶ್ರೀ ಗುರು ರಾಘವೇಂದ್ರ ಉತ್ಸವ” ಜರುಗಲಿದ್ದು, ಇದು ಆಧ್ಯಾತ್ಮಿಕತೆಯ ಸಾಂಸ್ಕೃತಿಕ ಮಹೋತ್ಸವವಾಗಲಿದೆ. ಮಂತ್ರಾಲಯ ಮಠಾಧೀಶರಾದ 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯ ಈ ಉತ್ಸವದ ಪ್ರಮುಖ ಆಕರ್ಷಣೆ.

ಈ ಉತ್ಸವದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ, ಅನೇಕ ಮಂತ್ರಿಗಳು, ಶಾಸಕರು, ಕಲೆ ಮತ್ತು ಸಿನಿಮಾ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. 30,000ಕ್ಕೂ ಹೆಚ್ಚು ಭಕ್ತಾಧಿಗಳ ಹಾಜರಾತಿ ನಿರೀಕ್ಷಿಸಲಾಗಿದ್ದು, ಕಾರ್ಯಕ್ರಮದ ವೈಭವ ಹೆಚ್ಚಿಸಲು ಅನೇಕ ವಿಶೇಷ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ.

ಉತ್ಸವದ ವಿಶೇಷತೆಗಳು:

  • ರಾಯರ ದೇಗುಲ ಮತ್ತು ಬೃಂದಾವನ ಮರುಸೃಷ್ಟಿ: 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಬೃಂದಾವನದಲ್ಲಿ ಪೂಜೆ ಮತ್ತು ಸೇವೆಗಳನ್ನು ನೆರವೇರಿಸುತ್ತಾರೆ.
  • ಸನ್ಮಾನ ಸಮಾರಂಭ: ಕನ್ನಡದ ಖ್ಯಾತ ನಟ ಡಾಲಿ ಧನಂಜಯ, ನಟಿ ಆಶಿಕಾ ರಂಗನಾಥ್, ಮತ್ತು ಇತರ 25 ಸಾಧಕರಿಗೆ “ಶ್ರೀ ಗುರು ರಾಘವೇಂದ್ರ” ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
  • ಭಜನೆ ಮತ್ತು ಸಂಗೀತ: ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಭಜನೆ, ಪ್ರವಚನ, ಹರಿಕಥೆ, ಹಾಗೂ ರಾಜೇಶ್ ಕೃಷ್ಣನ್, ಮಂಜುಳಾ ಗುರುರಾಜ್, ಅರ್ಚನಾ ಉಡುಪ ಮುಂತಾದ ಖ್ಯಾತ ಗಾಯಕರಿಂದ ಸಂಗೀತ ಕಾರ್ಯಕ್ರಮ.
  • ಆಕರ್ಷಕ ಪ್ರದರ್ಶನಗಳು: 30*40 ಅಡಿ ವಿಸ್ತೀರ್ಣದ ಬೃಹತ್ ರಂಗೋಲಿ ಮತ್ತು ರಾಯರ ಜೀವನ ಚರಿತ್ರೆಯ ಆಕರ್ಷಕ ಗ್ಯಾಲರಿ.
  • ಪರಿಮಳ ಪ್ರಸಾದ ವಿತರಣಾ: ಮಂತ್ರಾಲಯದಿಂದ ತಂದ ಪರಿಮಳ ಪ್ರಸಾದ ಮತ್ತು ಮಂತ್ರಾಕ್ಷತೆಯನ್ನು ಭಕ್ತಾಧಿಗಳಿಗೆ ವಿತರಿಸಲಾಗುತ್ತದೆ.

ಹೊಸ ಕಾರ್ಯಕ್ರಮ “ರಾಯರಿದ್ದಾರೆ” ಉದ್ಘಾಟನೆ:
ಫೆಬ್ರವರಿ 3 ರಿಂದ, “ಸಿರಿ ಕನ್ನಡ ವಾಹಿನಿ”ದಲ್ಲಿ “ರಾಯರಿದ್ದಾರೆ” ಎಂಬ ಹೊಸ ಧಾರಾವಾಹಿ ಆರಂಭವಾಗಲಿದೆ. ಇದು ಮಂತ್ರಾಲಯದ ನಿತ್ಯ ಪೂಜೆ, 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಚನ, ಮತ್ತು ರಾಯರ ಪವಾಡಗಳನ್ನು ಪರಿಷ್ಕೃತವಾಗಿ ತೋರಿಸಲಿದೆ.

ಉತ್ಸವದಲ್ಲಿ ಭಾಗವಹಿಸುವ ಅವಕಾಶ:
ಭಕ್ತಾಧಿಗಳು ತಮ್ಮ ಸಂಕಲ್ಪದೊಂದಿಗೆ 108 ಬಾರಿ “ಶ್ರೀ ಗುರು ರಾಘವೇಂದ್ರಾಯ ನಮಃ” ಎಂದು ಬರೆದ ಕಾಗದವನ್ನು ಬೃಂದಾವನದಲ್ಲಿ ಸಮರ್ಪಿಸಲು ಅವಕಾಶವಿದೆ.

“ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕೃಪೆಯಿಂದ ಎಲ್ಲರಿಗೂ ನೆಮ್ಮದಿ ದೊರೆಯಲಿ” ಎಂದು ಮಂತ್ರಾಲಯದ ಮಠಾಧೀಶರು ಆಶೀರ್ವಚನ ನೀಡಿದ್ದು, ಈ ಉತ್ಸವ ಭಕ್ತಾದಿಗಳಿಗೆ ವಿಶೇಷ ಅನುಭವ ನೀಡಲಿದೆ.”

Show More

Leave a Reply

Your email address will not be published. Required fields are marked *

Related Articles

Back to top button