ಎಸ್ಸೆಸ್ಸೆಲ್ಸಿಯ ಪೂರ್ವ ಸಿದ್ಧತಾ ಪರೀಕ್ಷೆಯನ್ನು ದಿನಾಂಕ 26/02/2024ರಿಂದ ಪ್ರಾರಂಭ ಮಾಡಲಾಗುವುದು ಎಂದು ಬೋರ್ಡ್ ತಿಳಿಸಿದ ಬೆನ್ನಲ್ಲೇ ಒಂದು ವಿವಾದ ಹುಟ್ಟಿಕೊಂಡಿತು. ಎಲ್ಲಾ ವಿಷಯದ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭವಾಗಿ, ಮಧ್ಯಾಹ್ನ 1.30ಕ್ಕೆ ಮುಗಿಯುತ್ತದೆ, ಆದರೆ ಶುಕ್ರವಾರದ ಪರೀಕ್ಷೆ ಮಾತ್ರ ಮಧ್ಯಾಹ್ನ 2 ಗಂಟೆಯಿಂದ, ಸಾಯಂಕಾಲ 5.15ರವರೆಗೆ ಇರುತ್ತದೆ. ಇದೇ ವಿವಾದದ ಕೇಂದ್ರ ಬಿಂದುವಾಗಿತ್ತು.
ಕೇವಲ ಒಂದು ಕೋಮಿಗೆ ಖುಷಿ ಪಡಿಸುವ ನಿಟ್ಟಿನಲ್ಲಿ ಪರೀಕ್ಷೆ ಸಮಯವನ್ನೇ ಬದಲಾಯಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತುಷ್ಟೀಕರಣದ ಪಿತಾಮಹ ಎಂದು ಕರ್ನಾಟಕ ಬಿಜೆಪಿ ತಮ್ಮ ಎಕ್ಸ್ ಖಾತೆಯಲ್ಲಿ ಲೇವಡಿ ಮಾಡಿದ್ದರು.
ಇದಕ್ಕೆ ಉತ್ತರ ಎಂಬಂತೆ ಕಾಂಗ್ರೆಸ್ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ “ಮಾರ್ಚ್ ಒಂದನೇ ತಾರೀಖಿನಂದು ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವ ಕಾರಣ ಅ ದಿನದ SSLC ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಮಾರನೇ ದಿನ ಶನಿವಾರ ಪಿಯುಸಿ ಪರೀಕ್ಷೆ ಇಲ್ಲದ ಕಾರಣ SSLC ಪರೀಕ್ಷೆ ಬೆಳ್ಳಿಗೆಯೇ ಆರಂಭವಾಗುತ್ತದೆ. ಪರೀಕ್ಷಾ ಕೇಂದ್ರಗಳ ಕೊರತೆ ಹಾಗೂ ಗೊಂದಲ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ.” ಎಂದು ಹೇಳಿದೆ.
“ಇದರಲ್ಲಿ ಸುಳ್ಳು ಅಪಪ್ರಚಾರದ ಮೂಲಕ ಪ್ರಚೋದನೆಗೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ಪಕ್ಷಕ್ಕೆ ಕನಿಷ್ಠ ಮರ್ಯಾದೆ ಇಲ್ಲ. ನಮಾಜ್ ಮಾಡುವುದಕ್ಕಾಗಿ ಶುಕ್ರವಾರ SSLC ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಏರ್ಪಡಿಸಲಾಗಿದೆ ಎನ್ನುವ ಬಿಜೆಪಿ ಗಾಂಪರು ಅದೇ ದಿನ ಬೆಳಿಗ್ಗೆ PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನಮಾಜ್ ಮಾಡುವ ಅಗತ್ಯವಿಲ್ಲವೇ ಎಂಬುದನ್ನು ಉತ್ತರಿಸಲಿ!” ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇದರ ಬೆನ್ನಲ್ಲೇ ತನ್ನ ಹೇಳಿಕೆಯನ್ನು ಎಕ್ಸ್ ನಿಂದ ಅಳಿಸಿದ ಬಿಜೆಪಿ, ನಿಜವಾಗಿಯೂ ಸುಳ್ಳು ಸುದ್ದಿ ಹಬ್ಬಿಸಿತ್ತೇ ಎಂದು ಜನರು ಅನುಮಾನ ಪಡುವಂತಾಗಿದೆ. ಸುಳ್ಳು ಸುದ್ದಿ ಹಬ್ಬಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.